ನವದೆಹಲಿ: ವೈಯಕ್ತಿಕವಾಗಿ ನಾನು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರವಾಗಿದ್ದೇನೆ ಎಂದು ಛತ್ತೀಸ್‌ಗಢ ಉಪಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಟಿಎಸ್ ಸಿಂಗ್ ಡಿಯೋ ಹೇಳಿದ್ದು, ‘ಈ ಪರಿಕಲ್ಪನೆಯು ಹೊಸದಲ್ಲ’ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಶಿ ತರೂರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಕೇಂದ್ರದ ನಡೆಯನ್ನು ವಿರೋಧಿಸಿದ್ದಾರೆ. ಆದರೆ, ಡಿಯೋ ಮಾತ್ರ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿ, ‘ವೈಯಕ್ತಿಕ ಮಟ್ಟದಲ್ಲಿ, ನಾನು ಒಂದು ರಾಷ್ಟ್ರ, ಒಂದು ಚುನಾವಣೆಯನ್ನು ಸ್ವಾಗತಿಸುತ್ತೇನೆ. ಇದು ಹೊಸ ಆಲೋಚನೆಯಲ್ಲ’ ಎಂದು ಅವರು ಹೇಳಿದ್ದಾರೆ.
‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಾಧ್ಯತೆಯನ್ನು ಪರಿಶೀಲಿಸುವಂತೆ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸಮಿತಿ ರಚಿಸಿದೆ. ಸರ್ಕಾರದ ಈ ಕ್ರಮವು ಪ್ರಸ್ತುತ ಸಂಸತ್ತಿನ ವಿಸರ್ಜನೆಯ ಸಾಧ್ಯತೆ ಹಾಗೂ ಅವಧಿಪೂರ್ವ ಲೋಕಸಭೆ ಚುನಾವಣೆಯನ್ನು ಘೋಷಿಸುವ ಸಾಧ್ಯತೆ ಇದೆ ಎಂಬ ಮಾತುಗಳ ಕೇಳಿಬರುತ್ತಿವೆ.
ಇದನ್ನೂ ಓದಿ; ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಾಯೋಗಿಕವಲ್ಲ: ತರೂರ್
ಇದೇ ವರ್ಷದ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಐದು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಮುಂದಿನ ವರ್ಷದ ಮೇ ಮತ್ತು ಜೂನ್‌ನಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ.
‘ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವ ಮೂಲಕ ಮುಂಬರುವ ಚುನಾವಣೆಗಳನ್ನು ವಿಳಂಬಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
‘ಒಂದು ರಾಷ್ಟ್ರ, ಒಂದು ಚುನಾವಣೆ ಪರವಾಗಿಲ್ಲ. ಆದರೆ, ನ್ಯಾಯಯುತ ಚುನಾವಣೆ ನಡೆಯಬೇಕು. ನ್ಯಾಯಸಮ್ಮತ ಚುನಾವಣೆಗಾಗಿ ನಮ್ಮ ಬೇಡಿಕೆಯನ್ನು ಮುಂದೂಡಲು ಅವರು (ಕೇಂದ್ರ) ಇದನ್ನು ತಂದಿದ್ದಾರೆ. ಇದು ಚುನಾವಣೆಯನ್ನು ವಿಳಂಬಗೊಳಿಸುವ ಪಿತೂರಿ ಎಂದು ನಾನು ಭಾವಿಸುತ್ತೇನೆ’ ಎಂದು ರಾವುತ್ ಸುದ್ದಿಗಾರರಿಗೆ ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.