ಮಂಗಳೂರು: ಕೇಂದ್ರ ಬಜೆಟ್ ಲ್ಲಿ ಕರಾವಳಿಗೆ ಒಂದೇ ಒಂದು ಅನುದಾನ ಇಲ್ಲ. ಶಿರಾಡಿಗೆ ಸುರಂಗ ಮಾರ್ಗ ಅಂತಾ ಹಲವು ವರ್ಷಗಳಿಂದ ಹೇಳುತ್ತಿದ್ದಾರೆ. ಆದರೆ ಯಾವುದೇ ಬಜೆಟ್ ನಲ್ಲಿ ಈ ಯೋಜನೆಗೆ ಹಣ ಇಟ್ಟಿಲ್ಲ ಎಂದು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ಗೃಹಸಚಿವ ಅಮಿತ್ ಶಾರನ್ನು ಬೆಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ರಸ್ತೆ ಮಾರ್ಗವಾಗಿ ಕರೆತಂದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಿಗೆ ಸೆಲ್ಯೂಟ್ ಹೊಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ. ರೋಡ್ ಶೋ ಮಾಡುವಾಗ ಅಮಿತ್ ಶಾ ರಸ್ತೆಯಲ್ಲಿರುವ ಗುಂಡಿಗಳನ್ನು ಲೆಕ್ಕ ಮಾಡಲಿ ಎಂದು ಟಾಂಗ್ ನೀಡಿದರು.
ತುಳು ಭಾಷೆಯನ್ನು ರಾಜ್ಯದ ಅಧೀಕೃತ ಭಾಷೆಯನ್ನಾಗಿ ಘೋಷಿಸುವ ವಿಚಾರವಾಗಿ ಮಾತನಾಡಿ, ಸರ್ಕಾರ ಅಧ್ಯಯನ ಸಮಿತಿ ಮಾಡಿರುವುದೇ ತುಳು ಭಾಷೆಗೆ ಮಾಡಿರುವ ಅವಮಾನ ಎಂದರು.
ತುಳು ಭಾಷೆಗೆ ಅದರದ್ದೇ ಆದ ಇತಿಹಾಸವಿದೆ. ಈ ಭಾಷೆಯ ಅಧ್ಯಯನ ಮಾಡಿ ವರದಿ ಕೊಡುವ ಅವಶ್ಯಕತೆ ಏನಿತ್ತು? ಇದು ಜನರಿಗೆ ಮೋಸ ಮಾಡುವ ತಂತ್ರ ಆಗಿದೆ ಎಂದು ಅಭಿಪ್ರಾಯಪಟ್ಟರು.