ಊಟಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸದ್ಯ ತಮಿಳುನಾಡಿಗೆ ತೆರಳಿದ್ದಾರೆ. ಬಳಿಕ ಅಲ್ಲಿನ ನೀಲ್‌ಗಿರೀಸ್ ಬಳಿ ಮಹಿಳೆಯರೇ ನಿರ್ವಹಿಸುತ್ತಿರುವ ಮಾಡೀಸ್ (moddy’s) ಚಾಕೊಲೇಟ್ ಫ್ಯಾಕ್ಟರಿಗೆ ಭೇಟಿ ನೀಡಿ, ಖುದ್ದಾಗಿ ಚಾಕೊಲೇಟ್ ತಯಾರಿಸುವ ವಿಧಾನವನ್ನು ಕಲಿತುಕೊಂಡಿದ್ದಾರೆ.
ತಮಿಳುನಾಡಿನ ಜನಪ್ರಿಯ ಚಾಕೋಲೆಟ್ ಬ್ರ್ಯಾಂಡ್ ಆಗಿರುವ ‘ಮಾಡೀಸ್’ ಅನ್ನು ಸುಮಾರು 70 ಮಹಿಳೆಯರು ನಿರ್ವಹಿಸುತ್ತಿದ್ದಾರೆ. ಅಲ್ಲಿಗೆ ಭೇಟಿ ನೀಡಿರುವ ರಾಹುಲ್, ಚಾಕೋಲೆಟ್ ಅನ್ನು ತಯಾರಿಸುವ ಬಗ್ಗೆ ವಿವರವಾದ ಮಾಹಿತಿ ಪಡೆದಿದ್ದಾರೆ. ಇದರ ಜೊತೆಗೆ ತಮಿಳು ಭಾಷೆ ಕಲಿಯಲೂ ಅವರು ಪ್ರಯತ್ನಿಸಿದ್ದಾರೆ.


ರಾಹುಲ್ ಅವರಿಗೆ ಮಹಿಳೆಯರು ಮಾಡೀಸ್ ಚಾಕೋಲೆಟ್ ತಯಾರಿಸುವ ವಿಧಾನವನ್ನು ಹೇಳಿಕೊಟ್ಟರು. ಆಪ್ರಾನ್ ಎಂಬ ಉಡುಗೆ ತೊಟ್ಟೇ ರಾಹುಲ್ ಚಾಕೊಲೇಟ್ ಮಾಡುವುದನ್ನು ಕಲಿತರು.
ಈ ವಿಡಿಯೋ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ‘70 ಮಹಿಳೆಯರು ಒಟ್ಟಾಗಿ ಊಟಿಯ ಪ್ರಸಿದ್ಧ ಚಾಕೊಲೇಟ್ ಫ್ಯಾಕ್ಟರಿಯೊಂದನ್ನು ನಡೆಸಿಕೊಂಡು ಬರುತ್ತಿದ್ದಾರೆ! ಮಾಡೀಸ್ ಚಾಕೊಲೇಟ್ ನಡೆದು ಬಂದ ಹಾದಿ ಇತರ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ನಡೆಸುತ್ತಿವವರಿಗೆ ಸ್ಫೂರ್ತಿ’ ಎಂದು ಹೊಗಳಿದ್ದಾರೆ.


ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ; ಶಾಲೆ ದ್ವೇಷದ ಮಾರುಕಟ್ಟೆ ಆಗ್ತಿದೆ ಎಂದ ರಾಹುಲ್
‘ಈ ಸಾಧನೆಯ ಹಿಂದಿನ ಶಕ್ತಿಗಳಾದ ಮುರಳೀಧರ್ ರಾವ್ ಮತ್ತು ಸ್ವಾತಿ ಅವರ ಉದ್ಯಮಶೀಲತಾ ಮನೋಭಾವವು ಸ್ಪೂರ್ತಿದಾಯಕ. 70 ಮಹಿಳೆಯರು ಕೂಡ ಅಷ್ಟೇ ಸ್ಪೂರ್ತಿದಾಯಕರಾಗಿದ್ದಾರೆ. ನಾನು ತಿಂದಿರುವ ಹಲವು ಚಾಕೊಲೇಟ್‌ಗಳಲ್ಲಿ ಈ ಚಾಕೊಲೇಟ್ ರುಚಿ ಅತ್ಯದ್ಭುತವಾಗಿದೆ’ ಎಂದು ಫಿದಾ ಆಗಿದ್ದಾರೆ.


ಜಿಎಸ್‌ಟಿಯನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಕರೆದಿರುವ ರಾಹುಲ್ ಗಾಂಧಿ, ದೇಶದ ಸಣ್ಣ ಮತ್ತು ಮಧ್ಯಮ ಉದ್ಯಮಗಳಂತೆಯೇ ಮಾಡೀಸ್ ಚಾಕೊಲೇಟ್‌ಗೂ ಜಿಎಸ್‌ಟಿಯ ಬಿಸಿ ಮುಟ್ಟಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗಿಂತ ಕೇಂದ್ರಕ್ಕೆ ದೊಡ್ಡ ಉದ್ಯಮಗಳೇ ಮುಖ್ಯವಾಗಿವೆ’ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.