Sunday, October 1, 2023
spot_img
- Advertisement -spot_img

‘ಹತ್ತಿ ಇಳಿಯಲು ಕಾಂಗ್ರೆಸ್ ಪಕ್ಷ ಬಸ್ ಅಲ್ಲ; ಮಾರ್ಗಮಧ್ಯೆ ಇಳಿದರೆ ಬೆಲೆ ಕಳೆದುಕೊಳ್ಳುತ್ತೇವೆ’

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇವೆ ಎಂದರೆ ಪ್ರತಿ ನಿಲ್ದಾಣದಲ್ಲೂ ಬಸ್ ಇಳಿದು ಹತ್ತುವಂತೆ ಮಾಡುವುದಲ್ಲ, ಒಮ್ಮೆ ಹತ್ತಿದರೆ ಕಡೆಯ ತನಕವೂ ಇರುತ್ತೇನೆ ಎಂದು ದೃಢ ನಿರ್ಧಾರ ಮಾಡಬೇಕು. ಬಸ್ ಹತ್ತುವುದು, ಇಳಿಯುವುದು ಮಾಡಬಾರದು. ಮಾಡಿದರೆ ಆಗ ನಮ್ಮ ಬೆಲೆ ನಾವೇ ಕಳೆದುಕೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಜೆಡಿಎಸ್ ನಾಯಕ, ಮಾಜಿ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಪಕ್ಷದಲ್ಲಿ ಹೆಚ್ಚು ಕಾಲ ಇದ್ದಷ್ಟು ಹಿರಿತನ, ಜವಾಬ್ದಾರಿ ಮತ್ತು ಗೌರವ ಬರುತ್ತದೆ. ಬರುವುದು, ಹೋಗುವುದು ಮಾಡಿದರೆ ನಾಯಕತ್ವಕ್ಕೂ ಧಕ್ಕೆಯಾಗುತ್ತದೆ. ಈ ಮಾತನ್ನು ಕೇವಲ ಇಂದು ಪಕ್ಷ ಸೇರ್ಪಡೆಯಾದ ಶಿವಮೊಗ್ಗ ಜಿಲ್ಲೆಯವರಿಗೆ ಮಾತ್ರ ಹೇಳುತ್ತಿಲ್ಲ, ರಾಜ್ಯದ ಸಮಸ್ತ ಕಾರ್ಯಕರ್ತರು, ಮುಖಂಡರಿಗೆ ಕಿವಿ ಮಾತು ಹೇಳುತ್ತಿದ್ದೇನೆ’ ಎಂದರು.

‘ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆಯುವುದೇ ಒಂದು ಸೌಭಾಗ್ಯ, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷದ ರಕ್ತ ಸಾಮಾನ್ಯವಾದದ್ದಲ್ಲ ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷ, ಕಾಂಗ್ರೆಸ್ಸಿಗನಾಗುವುದೆಂದರೆ ಅದು ಅಭಿಮಾನದ ಸಂಕೇತ. ಈ ರಾಷ್ಟ್ರಧ್ವಜ ಯಾರ ಹೆಗಲ ಮೇಲಿದೆ ಎಂದರೆ ಅದು ಕಾಂಗ್ರೆಸ್ಸಿಗರ ಹೆಗಲ ಮೇಲೆ ಮಾತ್ರ. ನಾವೆಲ್ಲಾ ಅಭಿಮಾನದಿಂದ ಕಾಂಗ್ರೆಸ್ಸಿಗರು ಎಂದು ಹೇಳಿಕೊಳ್ಳಬೇಕು’ ಎಂದು ಹೇಳಿದರು.

ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆಗೆ ಮೈಸೂರಿಗೆ ಶಿಫ್ಟ್ ಆಗಿದ್ದೇಕೆ..ಡಿಕೆಶಿ ಹೇಳಿದ್ದೇನು?

‘ಈಗ ನಾವು ಕೊಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ- ಜನತಾದಳ ಪಕ್ಷಗಳಿಗೆ ನೀಡಲು ಸಾಧ್ಯವಾಯಿತೇ? ಅರಣ್ಯ ಹಕ್ಕು, ಆದಿವಾಸಿಗಳ ಹಕ್ಕು ಸೇರಿದಂತೆ ಅನೇಕ ಕಾನೂನುಗಳನ್ನು ನೀಡಿದ್ದು ನಮ್ಮ ಕಾಂಗ್ರೆಸ್. ದೇಶದ ಎಲ್ಲ ಜಾತಿ, ಧರ್ಮಗಳ ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ. ದಿವಂಗತ ಬಂಗಾರಪ್ಪ ಅವರು ಆಶ್ರಯ ಯೋಜನೆಗೆ ಹೊಸ ರೂಪ ನೀಡಿದರು, ಗ್ರಾಮ ದೇವತೆಗಳ ದೇವಾಲಯ ಜೀರ್ಣೋದ್ಧಾರಕ್ಕೆ ಆರಾಧನಾ ಯೋಜನೆ ಪ್ರಾರಂಭ ಮಾಡಿದ್ದೇ ಬಂಗಾರಪ್ಪ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ’ ಎಂದು ಇತಿಹಾಸ ಮೆಲುಕು ಹಾಕಿದರು.

‘ಪಕ್ಷ ಸೇರ್ಪಡೆಯಾದ ಆಯನೂರು ಮಂಜುನಾಥ್ ಅವರು ಬಿಜೆಪಿಗೆ ಹೋದರು, ಜೆಡಿಎಸ್ ಸೇರಿದರು. ಆದರೆ, ಕಾಂಗ್ರೆಸ್ ಪಕ್ಷದ ಬಗೆಗಿನ ಒಲವು ಅವರನ್ನು ಮತ್ತೆ ಕರೆತಂದಿದೆ. ಎಲ್ಲ ನದಿಗಳು ಸಮುದ್ರ ಸೇರಿದಂತೆ ಎಲ್ಲರೂ ಕಾಂಗ್ರೆಸ್ ಸೇರಲೇ ಬೇಕು, ನಮ್ಮ ಪಕ್ಷ ಸಮುದ್ರ ಇದ್ದಂತೆ. ನಮ್ಮ ಪಕ್ಷ ಸೇರುವವರಿಗೆ ಯಾವುದೇ ಸ್ಥಾನಮಾನ ನೀಡುತ್ತೇವೆ ಎನ್ನುವ ಭರವಸೆ ನೀಡಿಲ್ಲ. ಅವರ ಶಕ್ತಿ, ಸಂಘಟನಾ ಸಾಮರ್ಥ್ಯ ನೋಡಿ ಪರಿಗಣಿಸಲಾಗುವುದು. ಯಾರು ಪಕ್ಷದ ಬೆಳವಣಿಗೆಗೆ ತಳಮಟ್ಟದಿಂದ ಕೆಲಸ ಮಾಡಿರುತ್ತಾರೆ ಅವರಿಗೆ ಮೊದಲ ಆದ್ಯತೆ, ಹೊಸದಾಗಿ ಬಂದಿರುವವರು ಹಳಬರನ್ನು ತಳ್ಳಿ ಮುಂದೆ ಬರಲು ಈ ಡಿ.ಕೆ. ಶಿವಕುಮಾರ್ ಅವಕಾಶ ನೀಡುವುದಿಲ್ಲ’ ಎಂದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles