ಮೈಸೂರು : ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಒಕ್ಕಲಿಗರ ಓಲೈಕೆಗೆ ಮುಂದಾಗಿದ್ದಾರಾ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಮೂಡುತ್ತಿದೆ. ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳೂ ಸಹ ಇದೇ ಮಂತ್ರವನ್ನು ಜಪಿಸುತ್ತಿದ್ದಾರಾ? ಇಂತಹದ್ದೊಂದು ಅನುಮಾನಕ್ಕೆ ಸೋಮವಾರ ನಗರದಲ್ಲಿ ನಡೆದ ಆದಿ ಚುಂಚನಗಿರಿಯ ಶಾಖಾ ಮಠದ ಕಾರ್ಯಕ್ರಮ ಕಾರಣವಾಗಿದೆ.
ಒಂದು ಕಡೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಗಿಂತ ಸಿದ್ದರಾಮಯ್ಯ ಅವರೇ ಒಕ್ಕಲಿಗರ ಏಳ್ಗೆಗೆ ಶ್ರಮಿಸಿದ್ದಾರೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದರೆ, ಮತ್ತೊಂದು ಕಡೆಗೆ ಕೆಂಪೇಗೌಡ ಜಯಂತಿ ಆಚರಿಸಿ, ನಾನೇ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಎದೆ ತಟ್ಟಿ ಹೇಳಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ : ಸೀರೆ ಹಂಚುವುದು ಒಂದು ಅಭಿವೃದ್ದಿ ನಾ? : ಆರಗ ವಿರುದ್ಧ ಕಿಡಿ ಕಾರಿದ ಕಿಮ್ಮನೆ
ಮೈಸೂರಿನ ಹೆಬ್ಬಾಳುನ ಆದಿ ಚುಂಚನಗಿರಿ ಶಾಖಾ ಮಠ ನೂತನ ಕಟ್ಟಡ, ವಿದ್ಯಾರ್ಥಿ ನಿಲಯ ಹಾಗೂ ಸಭಾಂಗಣ ಲೋಕಾರ್ಪಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಡಿಸಿಎಂ, ಎಚ್.ಡಿ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಇದರ ಲಾಭ ಪಡದುಕೊಂಡ ಕೃಷಿ ಸಚಿವ ಚೆಲುವರಾಯಸ್ವಾಮಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದರು. ಒಕ್ಕಲಿಗರಿಗೆ ದೇವೇಗೌಡರಿಗಿಂತ ಹೆಚ್ಚು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದು ಸಿದ್ದರಾಮಯ್ಯರೇ ಎಂದು ಘಂಟಾಗೋಷವಾಗಿ ಹೇಳಿದ್ದರು.


ಇನ್ನೂ ಸಿಎಂ ಸಿದ್ದರಾಮಯ್ಯ ಮಾತನಾಡಿ, ಚಲುವರಾಯಸ್ವಾಮಿ ಮಾತಿನಿಂದ ಹಿಂದೆ ಬೀಳಲಿಲ್ಲ. ಕಾರ್ಯಕ್ರಮದ ಭಾಷಣದುದ್ದಕ್ಕೂ ಒಕ್ಕಲಿಗರ ಸಮಾಜವನ್ನು ಓಲೈಸುವಂತಹ ಕೆಲಸ ಮಾಡಿದರು. ಮೊದಲಿಗೆ ಬಾಲಗಂಗಾಧರ ಸ್ವಾಮೀಜಿ ಅವರ ಗುಣಗಾನ ಮಾಡಿದರು. ಬಳಿಕ ಒಂದು ಹೆಜ್ಜೆ ಮುಂದೆ ಹೋಗಿ ರಾಜಕಾರಣದಲ್ಲಿ ಶ್ರೀಗಳು ನನ್ನನ್ನು ಇಷ್ಟ ಪಡುತ್ತಿದಷ್ಟು ಬೇರೆ ಯಾರನ್ನೂ ಇಷ್ಟ ಪಡುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.


ಅಷ್ಟೇ ಅಲ್ಲದೆ, ಒಕ್ಕಲಿಗ ಸಮಾಜದ ನಾಡಪ್ರಭು ಕೆಂಪೇಗೌಡರ ಜಯಂತಿ ಮಾಡಿದ್ದು ನಾನೇ, ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ನಾನೇ, ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿದ್ದು ನಾವೇ, ಎನ್ನುವ ಮುಖಾಂತರ ಪರೋಕ್ಷವಾಗಿ ದೇವೇಗೌಡರ ಕುಟುಂಬಕ್ಕೆ ಟಾಂಗ್ ನೀಡಿದ ಸಿದ್ದರಾಮಯ್ಯ ಒಕ್ಕಲಿಗರನ್ನು ಸೆಳೆಯುವ ಯತ್ನ ಮಾಡಿದ್ದಾರೆ.


ಇದನ್ನೂ ಓದಿ : ಬಿಜೆಪಿಯಲ್ಲಿ ಹೆಣ ಇಟ್ಟುಕೊಳ್ಳುವ ವ್ಯವಸ್ಥೆ ಇಲ್ಲ : ಸಿಎಂಗೆ ರಾಘವೇಂದ್ರ ಟಾಂಗ್
ಇತ್ತ ಒಕ್ಕಲಿಗ ಮತ ಸೆಳೆಯಲು ಸಿದ್ದರಾಮಯ್ಯ ಪ್ಲಾನ್ ಮಾಡಿದರೆ, ಅತ್ತ ಮಾಜಿ ಪ್ರಧಾನಿ ದೇವೇಗೌಡರಿಗೆ ಮಂಡಿಯೂರಿ ನಮಸ್ಕರಿಸುವ ಮೂಲಕ ಪ್ರತಾಪ್ ಸಿಂಹ ದೊಡ್ಡ ಗೌಡರ ಆಶೀರ್ವಾದ ಪಡೆದಿದ್ದಾರೆ. ಒಂದು ಕಡೆ ಬಿಜೆಪಿ ಜೆಡಿಎಸ್ ಮೈತ್ರಿ ಚರ್ಚೆ ಜೋರಾಗಿರುವ ಬೆನ್ನಲ್ಲೇ ಪ್ರತಾಪ್ ಸಿಂಹ ನಡೆ ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆ ಶುರು ಮಾಡಿದೆ. ಒಂದು ವೇಳೆ ಸಿದ್ರಾಮಯ್ಯ ಪುತ್ರ ಮೈಸೂರು ಲೋಕ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ರೆ ಪ್ರತಾಪ್ ಸಿಂಹ ದಳಪತಿಗಳ ಆಶೀರ್ವಾದದಿಂದ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ
ಒಟ್ಟಿನಲ್ಲಿ ಇಂದಿನ ಕಾರ್ಯಕ್ರಮದ ಸಂಪೂರ್ಣ ಲಾಭ ಪಡೆದ ಸಿಎಂ ಒಕ್ಕಲಿಗರ ಗುಣಗಾನ ಮಾಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲಲ್ಲು ಒಕ್ಕಲಿಗರ ಮತ ಕ್ರೋಢಿಕರಿಸಲು ಮುಂದಾಗಿದ್ದಾರೆ. ಇದಕ್ಕೆ ದಳಪತಿಗಳು ಯಾವ ರೀತಿ ತಿರುಗೇಟು ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.