ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ನಂದಕುಮಾರ್‌ಗೆ ಟಿಕೆಟ್ ನೀಡಿ ಎಂದು ಅಭಿಮಾನಿಗಳು ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಒತ್ತಾಯಿಸಿದರು.
ಸುಳ್ಯ, ಕಡಬ ಬ್ಲಾಕ್‌ನ ಸುಮಾರು 50ಕ್ಕೂ ಹೆಚ್ಚು ಕಾಂಗ್ರೆಸ್ಸಿಗರು ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿ ಅಹವಾಲು ಮುಂದಿಟ್ಟಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಸುಳ್ಯದಿಂದ ನಂದಕುಮಾರ್‌ಗೆ ಟಿಕೆಟ್ ನೀಡಬೇಕು. ಕಳೆದ 5 ವರ್ಷಗಳಿಂದ ಕ್ಷೇತ್ರದಲ್ಲಿ ಇವರು ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಟಿಕೆಟ್ ನೀಡಿದರೆ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಮುಖಂಡರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಹೆಚ್.ಎಂ.ನಂದಕುಮಾರ್ ಸಕ್ರಿಯ ಸಂಘಟಕ ಹಾಗೂ ಪಕ್ಷ ಮತ್ತು ಜನಸ್ನೇಹಿ ನಾಯಕ. ಅವರಿಗೆ ಸುಳ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಸೀಟ್ ನೀಡಬೇಕು ಎಂದು ಮನವಿ ಮಾಡಿದರು. ಅಹವಾಲು ಆಲಿಸಿದ ನಾಯಕರು ಎರಡು ದಿನದಲ್ಲಿ ನಿರ್ಧಾರ ತಿಳಿಸುವುದಾಗಿ ಭರವಸೆ ನೀಡಿದ್ದಾರೆ. ಸುಳ್ಯದಲ್ಲಿ ಈಗಾಗಲೇ ಕೃಷ್ಣಪ್ಪ ಎಂಬವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.