ಬೆಂಗಳೂರು: ಸ್ಯಾಂಟ್ರೋ ರವಿಯ ತನಿಖೆ ಮಾಡುತ್ತೇವೆ ಎಂದ ಸಿಎಂ ಬೊಮ್ಮಾಯಿ ಅವರದ್ದು ಸದಾರಮೆ ನಾಟಕದ ಡೈಲಾಗ್ ಇದ್ದಂತಿದೆ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ವಂಚನೆ, ಅತ್ಯಾಚಾರ, ವೇಶ್ಯವಾಟಿಕೆ ಇತ್ಯಾದಿ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಸ್ಯಾಂಟ್ರೋ ರವಿ ಪ್ರಕರಣ ಕುರಿತು ತನಿಖೆ ಮಾಡುತ್ತೇವೆಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆ ನಾಟಕವೆನಿಸುತ್ತಿದೆ ಎಂದಿದೆ. ಗೃಹ ಇಲಾಖೆಯೇ ಆತನ ಕೈಯ್ಯೊಳಗಿದ್ದು,ಸಿಎಂಗಿಂತಲೂ ಪ್ರಭಾವಿಯಾದವನ ತನಿಖೆ ಪೊಲೀಸರಿಂದ ಸಾಧ್ಯವೇ?ಎಂದು ಪ್ರಶ್ನಿಸಿದೆ.
ಅಂದಹಾಗೆ ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಈಗಾಗಲೇ ಸೂಕ್ತ ತನಿಖೆ ಮಾಡಲಾಗಿದ್ದು, ಆತನ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.
ಆತ ಯಾರ ಜೊತೆಗೆ ನಂಟು ಹೊಂದಿದ್ದ ಆತನ ಹಿನ್ನೆಲೆ ಏನು, ಯಾವ ಸಚಿವರು, ಶಾಸಕರು, ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದ ಎಂದೆಲ್ಲ ತನಿಖೆ ಮಾಡಲು ಆದೇಶ ನೀಡಿದ್ದೇವೆ ತನಿಖೆಯಿಂದ ಸತ್ಯಾಂಶ ಹೊರಗೆ ಬರಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದಿದ್ದರು.
ಸ್ಯಾಂಟ್ರೋ ರವಿ ನಡೆಸಿದ ಎಲ್ಲ ಅವ್ಯವಹಾರ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಕಾಲದಲ್ಲಿಯೇ ಆಗಿದೆ. ಅವರ ಕಾಲದಲ್ಲಿಯೇ ಜೈಲಿನಿಂದ ಹೊರಗೆ ಬಂದಿರುವುದು, ಆದ್ದರಿಂದ ಇದರಲ್ಲಿ ಯಾರ ಯಾರ ಪಾತ್ರ ಎಷ್ಟೋ ಇದೆ ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ, ಕಾಂಗ್ರೆಸ್ ನವರು ಇದಕ್ಕೆ ಉತ್ತರ ಕೊಡಬೇಕು ಎಂದು ಹೇಳಿದ್ದರು.