ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್, ಪಕ್ಷದ ಚುನಾವಣೆ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ಪುನರಾಯ್ಕೆ ಬಯಸುವ ಹಾಲಿ ಶಾಸಕರು ಕೂಡ ಅರ್ಜಿ ಹಾಕುವುದು ಕಡ್ಡಾಯ. ಜೊತೆಗೆ 2 ಲಕ್ಷ ರೂ. ದೇಣಿಗೆ ನೀಡಲು ಸೂಚಿಸಲಾಗಿದೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಹಾಕಬಹುದು. ಅರ್ಜಿಗೆ 5 ಸಾವಿರ ಶುಲ್ಕವಿದ್ದು, ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗದವರು 2 ಲಕ್ಷ ರೂ ಡಿಡಿ ಮತ್ತು ಕಾಂಗ್ರೆಸ್ ಸದಸ್ಯತ್ವ ವಿವರ ಕಡ್ಡಾಯವಾಗಿ ಲಗತ್ತಿಸಬೇಕು ಎಂದು ಮಾಹಿತಿ ನೀಡಿದ್ರು. ನವೆಂಬರ್ 5ರಿಂದ 15ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಸಾಮಾನ್ಯ ವರ್ಗದವರು 2 ಲಕ್ಷ ರೂ. ಡಿಡಿ ಮತ್ತು ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡಿಸಿದ ವಿವರ ಒದಗಿಸಲೇಬೇಕು. ಎಸ್‌ಸಿ, ಎಸ್‌ಟಿ ವರ್ಗದವರಿಗೆ ಶುಲ್ಕದಲ್ಲಿಶೇ.50 ರಷ್ಟು ರಿಯಾಯಿತಿ ನೀಡಲಾಗಿದೆ.
ನನ್ನನ್ನೂ ಒಳಗೊಂಡಂತೆ ಕಾಂಗ್ರೆಸ್ ಟಿಕೆಟ್ ಬೇಕಾದ ಎಲ್ಲರೂ ಅರ್ಜಿ ಸಲ್ಲಿಸಬೇಕು. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಅರ್ಜಿ ಶುಲ್ಕದಿಂದ ಬರುವ ಮೊತ್ತ ಪಕ್ಷದ ಕಟ್ಟಡ ಕಾಮಗಾರಿ ನಿಧಿಗೆ ಜಮಾ ಆಗಲಿದೆ. ಯಾರು ಬೇಕಾದ್ರೂ ಬನ್ನಿ ಕಾಂಗ್ರೆಸ್ ಟಿಕೆಟ್ ಬಯಸಿ ಯಾರು ಬೇಕಾದರೂ ಅರ್ಜಿ ಹಾಕಬಹುದು. ಅಂಥವರು ಪಕ್ಷದ ಸಿದ್ಧಾಂತ ಒಪ್ಪಿಕೊಳ್ಳಬೇಕು. ಪಕ್ಷ ಬಿಟ್ಟು ಹೋದವರ ವಿಚಾರದಲ್ಲೂಅವರು ಮರಳಿ ಬರುವುದಾದರೆ ಪರಿಶೀಲಿಸಲು ಸಮಿತಿಯಿದೆ. ಅದರಂತೆ ಮುಂದಿನ ತೀರ್ಮಾನವಾಗಲಿದೆ. ಅರ್ಜಿ ಹಾಕಲು ವಯಸ್ಸಿನ ಮಿತಿಯಿಲ್ಲ. ನಮ್ಮಲ್ಲಿ ಮಾರ್ಗದರ್ಶಕ ಮಂಡಳಿಯೂ ಇಲ್ಲ. 92 ವರ್ಷದ ಶಾಮನೂರು ಶಿವಶಂಕರಪ್ಪ ನಮ್ಮೊಂದಿಗಿದ್ದಾರೆ. ತಂದೆ, ತಾಯಿಯನ್ನು ನಾವು ಮನೆಯಿಂದ ಆಚೆ ಹಾಕುವುದಿಲ್ಲ. ಕಾಂಗ್ರೆಸ್ ಸದಸ್ಯತ್ವಕ್ಕೆ ಬಹಳ ಜನರು ಉತ್ಸುಕರಾಗಿರುವ ಕಾರಣ ಮತ್ತೊಮ್ಮೆ ಆನ್‌ಲೈನ್ ಮೂಲಕ ಈ ಪ್ರಕ್ರಿಯೆಗೆ ಅವಕಾಶ ನೀಡಲಾಗುವುದು ಎಂದರು.