ಹೈದರಾಬಾದ್ : ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಚುನಾವಣಾ ಪೂರ್ವ ಘೋಷಿಸಿದ್ದ ಐದು ಗ್ಯಾರಂಟಿಗಳು ಮಹತ್ವದ ಪಾತ್ರ ವಹಿಸಿತ್ತು. ಹಾಗಾಗಿ, ತೆಲಂಗಾಣದಲ್ಲೂ ಗ್ಯಾರಂಟಿ ಅಸ್ತ್ರ ಪ್ರಯೋಗಿಸಲು ‘ಕೈ’ ಪಾಳಯ ಮುಂದಾಗಿದೆ.
ಹೈದರಾಬಾದ್ ನಲ್ಲಿ ‘ವಿಜಯಭೇರಿ’ ಎಂಬ ಹೆಸರಿನಲ್ಲಿ ಇಂದು ಕಾಂಗ್ರೆಸ್ ಸಮಾವೇಶ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ.
6 ಗ್ಯಾರಂಟಿಗಳ ಘೋಷಣೆ : ಇಂದಿನ ‘ವಿಜಯಭೇರಿ’ ಸಮಾವೇಶದಲ್ಲಿ ಕರ್ನಾಟಕದಂತೆ ಸೋನಿಯಾ ಗಾಂಧಿ ಗ್ಯಾರಂಟಿಗಳ ಘೋಷಣೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ. ಕರ್ನಾಟಕದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದರೆ, ತೆಲಂಗಾಣದಲ್ಲಿ 6 ಗ್ಯಾರಂಟಿಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ : ಕಲ್ಯಾಣ ಕರ್ನಾಟಕ ವಿಮೋಚನಾ ದಿನ: ಕಲಬುರಗಿಯಲ್ಲಿ ಸಿಎಂ ಧ್ವಜಾರೋಹಣ
ಏನೆಲ್ಲಾ ಗ್ಯಾರಂಟಿ? ಮಹಾಲಕ್ಷ್ಮಿ, ರೈತ ಬರೋಸಾ, ಚೇಯೂಥ, ಅಂಬೇಡ್ಕರ್ ಹಸ್ತಂ, ಯುವ ವಿಕಾಸಂ, ಮಹಿಳಾ ಸಧಿಕರಥ ಗ್ಯಾರಂಟಿಗಳನ್ನು ಸೋನಿಯಾ ಗಾಂಧಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಸೋನಿಯಾ ಗಾಂಧಿ ಘೋಷಿಸಲಿರುವ ಆರು ಗ್ಯಾರಂಟಿಗಳ ಪೈಕಿ ಬಿಪಿಎಲ್ ವರ್ಗದ ಮಹಿಳೆಯರಿಗೆ ಮಾಸಿಕ 3,000 ರೂ., 500ರೂ.ಗೆ ಎಲ್‌ಪಿಜಿ ಸಿಲಿಂಡರ್, ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು ಯೋಜನೆಗಳು ಒಳಗೊಂಡಿವೆ.
ತೆಲಂಗಾಣ ವಿಧಾನಸಭೆಯ 119 ಸ್ಥಾನಗಳಿಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಶೀಘ್ರದಲ್ಲೇ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್ ಎಸ್), ಕಾಂಗ್ರೆಸ್, ಬಿಜೆಪಿ ಮತ್ತು ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷಗಳು ಚುನಾವಣಾ ಕಣದಲ್ಲಿರುವ ಪ್ರಮುಖ ಪಕ್ಷಗಳಾಗಿವೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.