ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕಾರಿಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಧು ಬಂಗಾರಪ್ಪನವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.
ಶಿಕಾರಿಪುರ ಪಟ್ಟಣದ ಶಿಶು ವಿಹಾರ ಮಾರ್ಗವಾಗಿ ಕಾಂಗ್ರೆಸ್ ನೂತನ ಕಚೇರಿಯ ಉದ್ಘಾಟನೆ ಸಮಾರಂಭಕ್ಕೆ ತೆರಳಿದ್ದರು. ಪಕ್ಷದ ಕಚೇರಿ ಉದ್ಘಾಟನೆ ನಡೆಯುತ್ತಿರುವ ವಿಚಾರ ತಿಳಿದಿದ್ದರೂ ಕೂಡ ಅದೇ ಮಾರ್ಗವಾಗಿ ಸಂಚರಿಸಿದ ಸಚಿವರು, ಕಾರ್ಯಕರ್ತರು ಬೇಡಿಕೊಂಡರೂ ಅವರೊಂದಿಗೆ ಮಾತನಾಡದೆ ತೆರಳಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಸೌಜನ್ಯಕ್ಕಾದರೂ ಸಚಿವ ಮಧು ಬಂಗಾರಪ್ಪನವರು ಕಾರಿನಿಂದ ಕೆಳಗೆ ಇಳಿಯುತ್ತಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಂದುಕೊಂಡಿದ್ದರು. ಆದರೆ ಕಾರ್ಯಕರ್ತರ ಭಾವನೆಗೆ ಸ್ಪಂದಿಸದ ಸಚಿವ ಮಧು ಬಂಗಾರಪ್ಪನವರ ಈ ವರ್ತನೆಗೆ ಸಾಕಷ್ಟು ಬೇಸರಕ್ಕೆ ಕಾರಣವಾಗಿದೆ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಮಧು ಬಂಗಾರಪ್ಪನವರು ತುರ್ತು ಸಭೆ ಇರುವುದರಿಂದ ಹಾಗೆಯೇ ತೆರಳಿದ್ದಾರೆ, ಇಲ್ಲಿ ಯಾವುದೇ ಬಣ ರಾಜಕೀಯ ಬೇಡ. ಏನಿದ್ದರೂ ಒಂದು ಸಣ್ಣ ಮಟ್ಟದ ಸಭೆ ಮಾಡಿ, ಗೊಂದಲಗಳನ್ನು ಸರಿ ಮಾಡಿಕೊಳ್ಳೋಣ ಎಂದು ಕಾರ್ಯಕರ್ತರಿಗೆ ಸಮಾಧಾನ ಮಾಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.