ಬೆಂಗಳೂರು: ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕಾಂಗ್ರೆಸ್ ವರ್ಕಿಂಗ್ ಕಮಿಟಿ (ಸಿಡಬ್ಲ್ಯೂಸಿ) ಸಭೆ ನಡೆಯಲಿದ್ದು, ಅದರಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳಿದ್ದಾರೆ.
ಹೈದರಾಬಾದ್‌ನಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್ ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೈದರಾಬಾದ್ ಗೆ ತೆರಳಿದರು. ಇಂದು ಹೈದರಾಬಾದ್ ನಲ್ಲೇ ಅವರು ವಾಸ್ತವ್ಯ ಹೊಡಲಿದ್ದಾರೆ ಎಂದು ತಿಳಿದುಬಂದಿದ್ದು, ನಾಳೆ ಅಲ್ಲಿಂದಲೇ ನೇರವಾಗಿ ಕಲಬುರ್ಗಿಗೆ ತೆರಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ; ಮೋದಿ, ಕೆಸಿಆರ್ ಒಂದೇ ನಾಣ್ಯದ ಎರಡು ಮುಖಗಳು : ಜೈರಾಂ ರಮೇಶ್
ಸಿಡಬ್ಲ್ಯೂಸಿ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭಾಗವಹಿಸಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಚಿತಪಡಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಮೊದಲ ಸಿಡಬ್ಲ್ಯೂಸಿ ಸಭೆಯಾಗಿದ್ದು, ನಾಳೆ ವಿಸ್ತೃತ ಕಾರ್ಯಕಾರಿ ಸಮಿತಿಯ ಸಭೆಯೂ ನಡೆಯಲಿದ್ದು, ಅಲ್ಲಿ ಪಕ್ಷಕ್ಕೆ ಸಂಬಂಧಿಸಿದ ಚರ್ಚೆಗಳನ್ನು ಮಾಡಲಾಗುತ್ತದೆ’ ಎಂದು ಹೇಳಿದರು.
ಇದನ್ನೂ ಓದಿ; ‘ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರ ರಾಜಕೀಯ ಪರಿಹಾರಕ್ಕೆ ಮುಂದಾಗಬೇಕು’
‘ಸೋನಿಯಾ ಗಾಂಧಿ, ರಾಹುಲ್, ಪ್ರಿಯಾಂಕಾ ಸೇರಿದಂತೆ ಎಲ್ಲ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸುತ್ತಾರೆ. ಮುಂಬರುವ ಐದು ರಾಜ್ಯಗಳ ಚುನಾವಣೆಗಳ ಬಗ್ಗೆ ಚರ್ಚೆ ನಡೆಸಲಿದ್ದು, ಅದಕ್ಕೆ ಅನುಗುಣವಾಗಿ ಯೋಜನೆ ಹಮ್ಮಿಕೊಳ್ಳಲಾಗುತ್ತದೆ. ನಮ್ಮ ‘ಇಂಡಿಯಾ’ ಮೈತ್ರಿಕೂಟದ ಪಾಲುದಾರರೊಂದಿಗೆ ಮುಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುವುದು’ ಎಂದು ಖರ್ಗೆ ಮಾಹಿತಿ ನೀಡಿದ್ದಾರೆ.
ಸಿಡಬ್ಲ್ಯುಸಿ ಸಭೆಯಲ್ಲಿ 39 ಸಾಮಾನ್ಯ ಸದಸ್ಯರು, 32 ಖಾಯಂ ಆಹ್ವಾನಿತರು ಮತ್ತು 13 ವಿಶೇಷ ಆಹ್ವಾನಿತರನ್ನು ಹೊಂದಿದೆ. ಇವರಲ್ಲಿ 15 ಮಹಿಳೆಯರು ಮತ್ತು ಹಲವಾರು ಹೊಸ ಮುಖಗಳಾದ ಶಶಿ ತರೂರ್, ಸಚಿನ್ ಪೈಲಟ್ ಮತ್ತು ಗೌರವ್ ಗೊಗೋಯ್ ಸಾಮಾನ್ಯ ಸದಸ್ಯರಾಗಿದ್ದಾರೆ.