ಬೆಂಗಳೂರು: ಎಸಿ ಹಾಲ್, ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಕೊರೋನಾ ನಿಯಂತ್ರಣ, ಮುನ್ನೆಚ್ಚರಿಕೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರೋಗ್ಯ ಇಲಾಖೆಯ ಸಭೆ ನಡೆಸಿದರು.
ಸಭೆಯ ಮಾಹಿತಿ ಹಂಚಿಕೊಂಡ ಸಚಿವ ಸುಧಾಕರ್, ಆದಷ್ಟು ಬೇಗ ಎಲ್ಲರೂ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು. ಜಿಲ್ಲಾಸ್ಪತ್ರೆಗಳಲ್ಲಿ ಕೊವಿಡ್ ಚಿಕಿತ್ಸೆಗೆ ಹಾಸಿಗೆ ಮೀಸಲಿಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಚಿಕಿತ್ಸೆಗೆ ಹಾಸಿಗೆ ಮೀಸಲಿಡಲಾಗಿದೆ. ಕೋವಿಡ್ ಕಡಿಮೆಯಾದ ಹಿನ್ನೆಲೆ ಲಸಿಕೆ ಪಡೆಯಲು ಮೀನಮೇಷ ಮಾಡಬಾರದು. ಎಲ್ಲರೂ ಬೂಸ್ಟರ್ ಡೋಸ್ ಪಡೆಯಬೇಕು ಎಂದರು.
ಶೇಕಡಾ 20ರಷ್ಟು ಜನರು ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದಾರೆ. ಎಲ್ಲಾ ಕಡೆ ಕ್ಯಾಂಪ್ ಮಾಡಿ ಬೂಸ್ಟರ್ ಡೋಸ್ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು. ತಕ್ಷಣಕ್ಕೆ ಎಲ್ಲಾ ಕಡೆ ಸ್ಕ್ರೀನಿಂಗ್ ಮಾಡಲ್ಲ. ದೇಶದಿಂದ ಬರುವ ಶೇ.3ರಷ್ಟು ಜನರಿಗೆ ವಿಮಾನ ನಿಲ್ದಾಣದಲ್ಲಿ ರ್‍ಯಾಂಡಮ್ ಸ್ಯಾಂಪಲ್ ಪರೀಕ್ಷೆ ಮಾಡಲಾಗುವುದು ರಾಜ್ಯದಲ್ಲಿ ಸದ್ಯ 4 ಸಾವಿರ ಕೋವಿಡ್ ಟೆಸ್ಟ್ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕೋವಿಡ್ ಟೆಸ್ಟ್ ಪ್ರಮಾಣ ಹೆಚ್ಚಿಸುತ್ತೇವೆ.
ಕೊರೊನಾ ರೂಪಾಂತರಿ ತಳಿ ವೇಗವಾಗಿ ಹರಡುವ ಮಾಹಿತಿಯಿದೆ. ಮತ್ತಷ್ಟು ವರದಿ ಬಂದ ನಂತರ ಅಧ್ಯಯನ ಮಾಡಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.