ಬೆಳಗಾವಿ: ಕೆಜಿಎಫ್ 2 ಹಾಡಿನ ದುರ್ಬಳಕೆ ಆರೋಪ ಮೇಲೆ . ಕಾಂಗ್ರೆಸ್‌ನ ಟ್ವಿಟ್ಟರ್ ಖಾತೆಯನ್ನ ನಿರ್ಬಂಧಿಸಿ ವಾಣಿಜ್ಯ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಈಗ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ ಚಾಪ್ಟರ್ 2 ಸಂಗೀತವನ್ನು ಅನುಮತಿ ಇಲ್ಲದೇ ಬಳಸಿರುವುದು ಕಾಂಗ್ರೆಸ್‌ಗೆ ಮುಳುವಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಟ್ವಿಟರ್‌ಗೆ ಆದೇಶಿಸಿತ್ತು.
ಈ ಕುರಿತು ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಡ್ಯಾನ್ಸ್ಗೆ ನಮ್ಮ ಕಾರ್ಯಕರ್ತರೊಬ್ಬರು ಕೆಜಿಎಫ್ ಹಾಡು ಸೇರಿಸಿ ವಿಡಿಯೊ ಮಾಡಿದ್ದರು. ಅದನ್ನು ಟ್ವಿಟರ್ನಲ್ಲಿ ಪ್ರಕಟಿಸಲಾಗಿತ್ತು. ಇದನ್ನೇ ನೆಪವಾಗಿಸಿ ನಮ್ಮ ಟ್ವಿಟರ್ ಖಾತೆ ಬ್ಲಾಕ್ ಮಾಡಿಸಲಾಗಿದೆ. ನೀವು ಟ್ವಿಟರ್ ಖಾತೆಯನ್ನದಾರೂ ಬ್ಲಾಕ್ ಮಾಡಿಸಿ ಅಥವಾ ರಾಹುಲ್ ಗಾಂಧಿ ಅವರನ್ನಾದರೂ ಜೈಲಿಗೆ ಹಾಕಿಸಿ. ನಮ್ಮ ಹೋರಾಟ, ಪ್ರಯತ್ನಗಳು ನಿಲ್ಲುವುದಿಲ್ಲ. ನಾವು ಎಂಥದ್ದೇ ಸಂದರ್ಭವನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದರು. ಅಲ್ಲದೇ ನನ್ನನ್ನು ಅಥವಾ ವಿನಯ್ ಕುಲಕರ್ಣಿಯನ್ನು ಬೇಕಿದ್ದರೂ ಜೈಲಿಗೆ ಹಾಕಿಸಿ. ಆದರೆ ಒಂದು ಮಾತು ನೆನಪಿಟ್ಟುಕೊಳ್ಳಿ. ಜನರ ಹೃದಯವನ್ನು ಜೈಲಿಗೆ ಹಾಕಲು ಸಾಧ್ಯವಿಲ್ಲ. ಅದು ಸದಾ ನಮ್ಮ ಪರವಾಗಿ ಮಿಡಿಯುತ್ತಿರುತ್ತದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಧಾನಮಂತ್ರಿಯ ಹುದ್ದೆಯನ್ನೇ ಸ್ಥಾನವನ್ನು ತ್ಯಾಗ ಮಾಡಿದವರು. ಇಂಥ ತ್ಯಾಗಿಗಳ ಮುಂದಾಳತ್ವದ ಪಕ್ಷದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವನ್ನು ತೆಗೆಯಲು ಎಲ್ಲರೂ ಕೈಜೋಡಿಸಬೇಕಿದೆ ಎಂದರು.