ಚನ್ನಪಟ್ಟಣ : ನನ್ನ ಹೃದಯ ವೀಕಾಗಿದೆ ಎಂದು ಕಣ್ಣೀರು ಹಾಕಿ, ಸುಳ್ಳು ಭರವಸೆ ನೀಡಿ, ನಯವಂಚಕತನದಿಂದ ಕಳೆದ ಚುನಾವಣೆಯಲ್ಲಿ ಗೆದ್ದ ಕುಮಾರಸ್ವಾಮಿ ಕ್ಷೇತ್ರಕ್ಕೆ ಯಾವುದೇ ಶಾಶ್ವತ ಕೊಡುಗೆ ನೀಡಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದರು.
ಸ್ವಾಭಿಮಾನ ಸಂಕಲ್ಪ ನಡಿಗೆಗೆ ಚಾಲನೆ ನೀಡಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಳೆದ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ, ವಾಮಮಾರ್ಗದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಕೊಟ್ಟಮಾತಿನಂತೆ ನಡೆದುಕೊಳ್ಳಲಿಲ್ಲ.
ಕುಮಾರಸ್ವಾಮಿ ಆಯ್ಕೆ ಬಳಿಕ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಭ್ರಷ್ಟಾಚಾರ, ಗೂಂಡಾಗಿರಿ, ದೌರ್ಜನ್ಯಗಳು ಹೆಚ್ಚಾಗಿವೆ. ತಾಲೂಕಿನ ಆಡಳಿತ ಹಳಿತಪ್ಪಿದೆ. ಇಲ್ಲಿಂದ ಆಯ್ಕೆಯಾದ ಬಳಿಕ ಅವರೆಷ್ಟುಬಾರಿ ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ. ಅವರನ್ನು ನಂಬಿ ಮತದಾರರು ಕ್ಷೇತ್ರದಿಂದ ಆಯ್ಕೆ ಮಾಡಿದರು. ಆದರೆ, ಗೆದ್ದ ನಂತರ ಅವರು ಜನರ ಸಂಕಷ್ಟಪರಿಹರಿಸುವ ಕೆಲಸ ಮಾಡಲಿಲ್ಲ ಎಂದರು.
ಕುಮಾರಸ್ವಾಮಿ ಗೆದ್ದು ಮುಖ್ಯಮಂತ್ರಿಯಾದರೆ ಸಾಲ ಮನ್ನಾ ಆಗುತ್ತೆ ಎಂದು ತಾಲೂಕಿನ ಜನ ನಂಬಿದ್ದರು. ಆದರೆ, ಅವರು ಸಿಎಂ ಆಗಿದ್ದ 14 ತಿಂಗಳ ಅವಧಿಯಲ್ಲಿ ಒಂದು ಬಾರಿಯೂ ಕ್ಷೇತ್ರಕ್ಕೆ ಬರಲಿಲ್ಲ. ಜೆಡಿಎಸ್‌ಗೆ ಯಾವುದೇ ಕಾರಣಕ್ಕೂ 20 ಸ್ಥಾನವೂ ಬರುವುದಿಲ್ಲ. ಪಂಚರತ್ನ ಯಾತ್ರೆ ಮಾಡುತ್ತಿರುವ ಕುಮಾರಸ್ವಾಮಿ, ರಾಜ್ಯದಲ್ಲಿ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ‍್ಯಗಳನ್ನು ಮೆಚ್ಚಿರುವ ಜನತೆ ಮತ್ತೊಮ್ಮೆ ಬಿಜೆಪಿ ಗೆ ಆಶೀರ್ವದಿಸಲಿದ್ದಾರೆಂದು ಭರವಸೆ ನೀಡಿದರು.