ಬೆಂಗಳೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಾದಾಮಿ ಅಥವಾ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬರುವ ವಿಶ್ವಾಸವಿಲ್ಲಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಸಿದ್ದರಾಮಯ್ಯ ಅವರದ್ದು ಓಲೈಕೆ ರಾಜನೀತಿಯಾಗಿದೆ. ಪಿಎಫ್‌ಐ, ಎಸ್‌ಡಿಪಿಐ ಓಲೈಕೆ ಮಾಡುತ್ತಾರೆ. ಹೀಗಾಗಿ ಅವರು ಯಶಸ್ಸು ಕಾಣಲು ಸಾಧ್ಯವಿಲ್ಲ. ಅವರ ವಿರುದ್ಧ ಕೋಲಾರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿರುಗೇಟು ನೀಡಿದರು.
ಸ್ವಂತ ಜಿಲ್ಲೆ ಮೈಸೂರಿನಲ್ಲಿ ನಿಂತು ಗೆಲ್ಲುವ ವಿಶ್ವಾಸ ಸಿದ್ದರಾಮಯ್ಯರಿಗಿಲ್ಲ. ಬಾದಾಮಿಯಲ್ಲಿ ಮತ್ತೊಮ್ಮೆ ಕಣಕ್ಕಿಳಿದು ಗೆಲ್ಲುವ ವಿಶ್ವಾಸವೂ ಇಲ್ಲ ಎಂದು ಟಾಂಗ್ ಕೊಟ್ಟರು. ದೇಶದ ಜನ ಒಂದೊಂದೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಗುಡಿಸುತ್ತಿದ್ದಾರೆ. ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದಾಗ ಜನರು ಗುಡಿಸಿದರು. ಜನರೇ ಕಾಂಗ್ರೆಸ್ ಪಕ್ಷವನ್ನು ಗುಡಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು, ಅವರೇ ತೀರ್ಮಾನ ಮಾಡುವುದು, ಅವರೇ ಗುಡಿಸುತ್ತಾರೆ ಎಂದು ಹೇಳಿದರು.