ಬೆಂಗಳೂರು: ನಾವು ಸಂವಿಧಾನ ಬದ್ಧವಾಗಿ ಮೀಸಲಾತಿ ಕೊಡುವ ಕೆಲಸ ಮಾಡಿದ್ದೇವೆ. ಆದರೆ ಕಾಂಗ್ರೆಸ್‌ನವರಿಗೆ ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ದಿನಕ್ಕೊಂದು ವೇಷ ಹಾಕುವ ವ್ಯಕ್ತಿಯೂ ನಾವಲ್ಲ, ದಿನಕ್ಕೊಂದು ವೇಷ ಹಾಕುವ ಪಾರ್ಟಿಯೂ ನಮ್ಮದಲ್ಲ ಎಂದರು. ಹಳೆ ಮೈಸೂರು ಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಯಾವುದೇ ಪಕ್ಷ ಯಶಸ್ವಿ ಆಗಲು ಸಾಧ್ಯವಿಲ್ಲ. 2023ರಲ್ಲಿ ಗೆಲ್ಲುವ ಶಾರ್ಟ್ ಟರ್ಮ್, ಪಕ್ಷ ಸಂಘಟನೆಯ ಲಾಂಗ್ ಟರ್ಮ್ ಯೋಜನೆ ಮಾಡುತ್ತಿದ್ದೇವೆ ಎಂದರು.
ಮೀಸಲಾತಿ ಹೆಸರಿನ ಮೂಲಕ ಬಿಜೆಪಿ ಸರ್ಕಾರವನ್ನು ಅಸ್ತಿರಗೊಳಿಸುವ ಕೆಲಸ ಕಾಂಗ್ರೆಸ್ ನವ್ರು ಮಾಡಿದರು. ಆದರೆ ಒಬಿಸಿ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗದ ರೀತಿಯ, ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದೇವೆ.
ಕಾನೂನು ಬದ್ಧವಾಗಿ ಮಾಡಿರುವ ಕ್ರಮದ ಬಗ್ಗೆ ವಿವರವನ್ನು ಆದಷ್ಟು ಬೇಗ ಕೊಡುತ್ತೇವೆ ಎಂದು ಭರವಸೆ ನೀಡಿದರು. ಹಳೆ ಮೈಸೂರು ಭಾಗದಲ್ಲಿ ನಾವು ದುರ್ಬಲರಾಗಿದ್ದೇವೆ. ಪಕ್ಷ ಬೆಳೆಸುವುದು ನಿರಂತರ ಕಾರ್ಯ, ಅದನ್ನು ನಾವು ಮಾಡುತ್ತೇವೆ. ಅದಕ್ಕೆ ಏನು ಬೇಕಾದರೂ ಹೆಸರು ಕೊಡಬಹುದುಎಂದು ಹೇಳಿದರು.