ಬೆಂಗಳೂರು: ದೇಶದಲ್ಲಿ ಬಿಜೆಪಿ ಮಾಡಿದ್ದು ಜಾತಿವಾದದ ರಾಜಕಾರಣ ಅಲ್ಲ. ಹಿಂದುತ್ವದ ಮತ್ತು ವಿಕಾಸದ ರಾಜಕಾರಣ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾ ಖಾನ್ ಎಂದು ನಾನು ಹೆಸರಿಟ್ಟಿಲ್ಲ ರಾಜ್ಯದ ಜನರೇ ಹೆಸರಿಟ್ಟಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಎಂದು ಹೆಸರಿಟ್ಟಿರುವ ಅವರ ತಂದೆಯ ಆತ್ಮ ವಿಲ-ವಿಲವೆಂದು ಒದ್ದಾಡುತ್ತಿರಬಹುದು ಎಂದು ವ್ಯಂಗ್ಯವಾಡಿದರು.
ನಮ್ಮದು ಅಭಿವೃದ್ಧಿ ರಾಜಕಾರಣವಾಗಿದೆ. ನಮ್ಮ ತಾಕತ್ ಇರೋದೇ ಹಿಂದುತ್ವ, ಅಭಿವೃದ್ಧಿ ರಾಜಕಾರಣದಲ್ಲಿ. ಮನೆ ಒಡೆಯುವ ಜಾತಿ ರಾಜಕಾರಣ ನಮ್ಮದಲ್ಲ. ನಾನು ಶುದ್ಧ ಅಂತ ಹೇಳಿಕೊಳ್ಳಲೂ ಶುದ್ಧತೆ ಇರಬೇಕು ಸಿದ್ದರಾಮಯ್ಯ ಅವರೇ. ಶುದ್ಧತೆ ಇಲ್ಲದವರು ಬೆರಕೆಯ ರಾಜಕಾರಣಿ ಆಗ್ತಾರೆ ಹೊರತು, ಶುದ್ಧ ಆಗೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿ ಪ್ರಕೋಷ್ಠಗಳ ಸಮಾವೇಶ ಇಷ್ಟು ದೊಡ್ಡದಾಗಿ ಮಾಡ್ತಿದ್ದೇವೆ. ಇಂತಹ ದೊಡ್ಡ ಕಾರ್ಯಕರ್ತ ಬಳಗ ಹೊಂದಿರುವ ಪಕ್ಷವನ್ನ ನೂರು ಜನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಂದರೂ ಕಟ್ಟುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.