ಬೆಂಗಳೂರು: ಮಾರ್ಚ್ 24 ಮತ್ತು 25ರಂದು ಬೆಂಗಳೂರು ಹಬ್ಬ ನಡೆಯಲಿದ್ದು, ಮೊದಲ ದಿನ ವಿಧಾನಸೌಧ ಮುಂಭಾಗ ಚಾಲನೆ ನೀಡಲಾಗುವುದು ಎಂದು ಅಬಕಾರಿ ಸಚಿವ ಗೋಪಾಲಯ್ಯ ಮಾಹಿತಿ ನೀಡಿದರು.
ಸಚಿವ ಆರ್. ಅಶೋಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಜನರನ್ನು ಸೆಳೆಯುವಂತೆ ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ ಕ್ರೀಡೆ, ಎತ್ತಿನ ಬಂಡಿ, ಸೈಕಲ್, ದ್ವಿಚಕ್ರ ವಾಹನ ಜಾಥಾ, ಕಾರುಗಳ ರ್ಯಾಲಿ ಆಯೋಜಿಸಲು ನಿರ್ಧರಿಸಲಾಗಿದೆ. ಕಬ್ಬನ್ ಪಾರ್ಕ್, ಲಾಲ್ ಬಾಗ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯಲಿದೆ.
ನಗರದ ಎಲ್ಲ ಪಾರ್ಕ್, ಕೆರೆ, ಐತಿಹಾಸಿಕ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗುವುದು. ಇದೊಂದು ರೀತಿ ರಾಜಧಾನಿಯ ಮನೆ ಮನೆಯ ಹಬ್ಬವಾಗಲಿದೆ. ಫುಡ್ ಫೆಸ್ಟಿವಲ್, ಚಿತ್ರಕಲಾ ಸ್ಪರ್ಧೆ, ಪುಸ್ತಕ ಜಾತ್ರೆ ಎಲ್ಲವೂ ಇರಲಿದೆ. ಖ್ಯಾತ ಕಲಾವಿದರು, ನಟರು, ಸಾಂಸ್ಕೃತಿಕ ದಿಗ್ಗಜರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದರು.
ವಿಧಾನಸೌಧ ಮುಂಭಾಗ ನಾಡಪ್ರಭು ಕೆಂಪೇಗೌಡ, ಜಗಜ್ಯೋತಿ ಬಸವೇಶ್ವರ ಪ್ರತಿಮೆ ಮಾರ್ಚ್ 23ರಂದು ಅನಾವರಣ ಮಾಡಲು ನಿರ್ಧರಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಕರೆಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.