ರಾಮನಗರ: ‘ನಮ್ಮ ದುಡ್ಡಿನಲ್ಲಿ ಕೆಆರ್‌ಎಸ್ ಡ್ಯಾಂ ಕಟ್ಟಿರೋದು ತಮಿಳುನಾಡಿಗೆ ನೀರು ಬಿಡುವುದಕ್ಕಾ? ಬೇಕಿದ್ರೆ ಅವರ ರಾಜ್ಯದಲ್ಲಿ, ಅವರದ್ದೇ ದುಡ್ಡಿನಲ್ಲಿ ಎರಡು ಮೂರು ಡ್ಯಾಂ ಕಟ್ಟಲಿ. ಕರ್ನಾಟಕ ಸರಿಯಾಗಿ ನೀರು ಬಿಡುತ್ತಿಲ್ಲ ಎಂದು ತಮಿಳುನಾಡು ಸಂಸದರು ನಿನ್ನೆ ರಾಜ್ಯಸಭೆಯಲ್ಲಿ ಹೇಳುತ್ತಾರೆ. ನಾನು ದೆಹಲಿಗೆ ಭೇಟಿ ನೀಡಿದಾಗ ಪ್ರಧಾನಿ ಮೋದಿ ಅವರ ಜತೆ ಈ ವಿಚಾರವಾಗಿ ಚರ್ಚೆ ನಡೆಸುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಬಿಡದಿಯ ತಮ್ಮ ತೋಟದ ಮನೆಯಲ್ಲಿ ಮಾತನಾಡಿದ ಅವರು, ‘ಹಬ್ಬ ಆಚರಣೆ ಮಾಡುವ ಸಂದರ್ಭದಲ್ಲಿ ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡಲು ಆದೇಶ ನೀಡಿದೆ. ನಿನ್ನೆ ರಾತ್ರಿಯಿಂದಲೇ ಕಾವೇರಿ-ಕಬಿನಿಯಿಂದ ನೀರು ಬಿಡುತ್ತಿದ್ದಾರೆ. ನೀರಿನ ಕೊರತೆಯಿಂದ ಈಗಾಗಲೇ ನಮ್ಮ ರೈತರ ಬೆಳೆಗಳಿಗೆ ಸಾಕಷ್ಟು ನಷ್ಟವಾಗಿದೆ. ಪ್ರತಿ ಬಾರಿ ಕಾವೇರಿ ಪ್ರಾಧಿಕಾರದ ಸಭೆ ಆದಾಗ, ನಮ್ಮ ಅಧಿಕಾರಿಗಳು ವರ್ಚುಲ್ (ಆನ್‌ಲೈನ್) ಮೂಲಕ ಭಾಗಿಯಾಗ್ತಾರೆ. ತಮಿಳುನಾಡಿನ ಅಧಿಕಾರಿಗಳು ಎಲ್ಲರೂ ಅಲ್ಲೇ ಹೋಗಿ ಸಭೆಯಲ್ಲಿ ಭಾಗಿಯಾಗ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ; ಮಂಡ್ಯ, ತುಮಕೂರು ಸೀಟ್ ಇದ್ಯಾವುದೂ ಚರ್ಚೆನೇ ಆಗಿಲ್ಲ; ಹೆಚ್‌ಡಿಕೆ
‘ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ರಾಜ್ಯ ಸಭೆಯಲ್ಲಿ ಕಾವೇರಿ ವಿಚಾರವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲಿದ್ರು ಎಂದು ನಾನು ಕಾಂಗ್ರೆಸ್‌ಗೆ ಕೇಳುತ್ತೇನೆ. ನಿಲ್ಲಲು ಸಾಧ್ಯವಾಗದೆ ಇರೋ ಪರಿಸ್ಥಿತಿಯಲ್ಲೂ ದೇವೇಗೌಡರು ಸದನದಲ್ಲಿ ಚರ್ಚೆ ಮಾಡಿದ್ದಾರೆ, ಸಂಸತ್ತಿನಲ್ಲಿ ದೇವೇಗೌಡರು ಏಕಾಂಗಿಯಾಗಿ ಹೋರಾಟ ಮಾಡ್ಬೇಕು. ಇಂಡಿಯಾ ಒಕ್ಕೂಟದ ಅಧ್ಯಕ್ಷ ಖರ್ಗೆ ಅವರು ಕಾವೇರಿ ಬಗ್ಗೆ ಮಾತನಾಡಬೇಕಿತ್ತು, ಯಾಕೆ ಮಾತನಾಡಿಲ್ಲ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
‘ನೀರಿನ ವಿಚಾರದಲ್ಲಿ ತಮಿಳುನಾಡಿನವರು ಹೇಗೆ ನಡೆದುಕೊಳ್ಳುತ್ತಾರೆ, ನೀವು ಹೇಗೆ ನಡೆದುಕೊಳ್ಳುತ್ತಿದ್ದೀರಾ ಗೊತ್ತಾಗುತ್ತೆ. ತಮಿಳುನಾಡು ಅರ್ಜಿ ಹಾಕಿದ ತಕ್ಷಣವೇ ನೀರು ಯಾಕೆ ಬಿಟ್ರೀ? ಸರ್ಕಾರ ಪ್ರೊಟೆಸ್ಟ್ ಮಾಡಲಿಲ್ಲ ಯಾಕೆ? ಪ್ರಾಧಿಕಾರದ ನೀರು ಬಿಡು ಎಂದು ಹೇಳಿದ ತಕ್ಷಣ ಬಿಡಬೇಕು ಅಂತೇನಿಲ್ಲ. ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಿ. ಸ್ವಾತಂತ್ರ್ಯ ಬಂದ ಬಳಿಕವೂ ನಮಗೆ ನೀರಿನ ಹಂಚಿಕೆ ಸರಿಯಾಗಿ ಆಗಿಲ್ಲ’ ಎಂದು ಹೇಳಿದರು.
ಇದನ್ನೂ ಓದಿ; ಕಾವೇರಿ ವಿವಾದ : ಮನೆ ಬಾಗಿಲಿಗೆ ಬಂದು ಬೇಡಿಕೊಂಡಿದ್ದಕ್ಕೆ ವೋಟ್ ಹಾಕಿರೋದು, ಗ್ಯಾರಂಟಿಗಲ್ಲ
‘ದೇವೇಗೌಡರು ಪ್ರಧಾನಿಯಾಗಿದಾಗ ಬಾಂಗ್ಲಾದೇಶ ನೀರು ಸಮಸ್ಯೆ ಬಗೆಹರಿಸಿದ್ದರು. ನಮ್ಮ ದುರಾದೃಷ್ಟಕ್ಕೆ ನಮ್ಮ ನೀರಿನ ಸಮಸ್ಯೆಯೇ ಬಗೆಹರಿಸಲು ಆಗಲಿಲ್ಲ. ನಾವು ಕಟ್ಟಿರುವ ಡ್ಯಾಂ ಇದು, ಬೇರೆ ಸರ್ಕಾರಗಳು ಹಣ ಕೊಟ್ಟಿಲ್ಲ. ನಮ್ಮ ರಾಜ್ಯವನ್ನು ಕೇಂದ್ರ ಸರ್ಕಾರ ಲೆಕ್ಕಕ್ಕೇ ಇಟ್ಟಿಲ್ಲ. ರಸ್ತೆಯಲ್ಲಿ ಪ್ರತಿಭಟನೆ ಮಾಡಿದರೆ ಸಮಸ್ಯೆ ಪರಿಹಾರ ಆಗಲ್ಲ, ಸರ್ಕಾರ ಕಠಿಣ ನಿರ್ದಾರ ಮಾಡಬೇಕು’ ಎಂದು ಹೇಳಿದರು.
‘ಕೇಂದ್ರದಲ್ಲಿ ಎದುರು ರಾಜ್ಯದ ಪರವಾಗಿ ಧ್ವನಿ ಎತ್ತುವವರೇ ಇಲ್ಲ. ಎಲ್ಲರೂ ಕೇಂದ್ರದ ಮುಂದೆ ಧೈರ್ಯವಾಗಿ ಪ್ರಶ್ನಿಸಬೇಕು ಎಂದು ನಾನು ಬಿಜೆಪಿ ಸ್ನೇಹಿತರಿಗೂ ಹೇಳುತ್ತೇನೆ. ಎಸಿ ರೂಮ್‌ನಲ್ಲಿ ಕುಳಿತುಕೊಂಡು ನೀರು ಬಿಡಿ ಅಂತ ಹೇಳೋದು ಕಾವೇರಿ ಪ್ರಾಧಿಕಾರದವರ ಕೆಲಸವಲ್ಲ’ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.