ಬೆಂಗಳೂರು: ಧ್ರುವನಾರಾಯಣ್ ಪುತ್ರ ದರ್ಶನ್‍ಗೆ ನಂಜನಗೂಡು ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಗಿದೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‍ನಿಂದ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು, ಮೈಸೂರಿನ 11 ಕ್ಷೇತ್ರಗಳಲ್ಲಿ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಧ್ರುವನಾರಾಯಣ್ ನಿಧನದ ಪರಿಣಾಮ ಪುತ್ರ ದರ್ಶನ್‍ಗೆ ಟಿಕೆಟ್ ಕೊಡಬೇಕೆಂದು ಒತ್ತಾಯಿಸಲಾಗಿತ್ತು.
ಹೆಚ್.ಸಿ.ಮಹದೇವಪ್ಪ ಧ್ರುವನಾರಾಯಣ್ ಮನೆಗೆ ಆಗಮಿಸಿ, ಧ್ರುವನಾರಾಯಣ್ ರ ಪುತ್ರನಿಗೆ ಸಾಂತ್ವನ ಹೇಳಿ ನಾನು ನಂಜನಗೂಡು ಕ್ಷೇತ್ರದ ಟಿಕೆಟ್ ರೇಸ್‍ನಿಂದ ಹಿಂದೆ ಸರಿಯುತ್ತಿದ್ದೇನೆ. ದರ್ಶನ್ ಧ್ರುವನಾರಾಯಣ್‍ಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಕಾಂಗ್ರೆಸ್ ಬಲವರ್ಧನೆಗೆ ತುಂಬಾ ಶ್ರಮಿಸಿದ್ದಾರೆ. ಅವರನ್ನು ಕಳೆದುಕೊಂಡ ನೋವಿನಲ್ಲಿ ನಾವೆಲ್ಲರೂ ಇದ್ದೇವೆ, ಪುತ್ರನಿಗೆ ಟಿಕೆಟ್ ನೀಡಿ ಧ್ರುವನಾರಾಯಣ್ ಕುಟುಂಬದ ಜೊತೆ ಕಾಂಗ್ರೆಸ್ ಇದೆ ಎಂಬ ಸಂದೇಶ ರವಾನಿಸಬೇಕು ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಆಗ್ರಹಿಸಿದ್ದರು. ಧ್ರುವನಾರಾಯಣ್ ಪತ್ನಿ ಕೂಡಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯದ ಹಿರಿಯ ನಾಯಕರು ಟಿಕೆಟ್ ನೀಡೋ ವಿಚಾರವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದರು. ಇದೀಗ ಧ್ರುವನಾರಾಯಣ್ ನಿಧನದ ಪರಿಣಾಮ ಪುತ್ರ ದರ್ಶನ್‍ಗೆ ಟಿಕೆಟ್ ಘೋಷಿಸಲಾಗಿದೆ.
ಇಂದು AICC ಯಿಂದ ಬಿಡುಗಡೆಯಾದ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿಯಲ್ಲಿ ಪ್ರಕಟವಾಗಿದ್ದು ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ದರ್ಶನ್ ಧ್ರುವನಾರಾಯಣ್ ರವರಿಗೆ ಅಭಿನಂದನೆಗಳು ಎಂದು ಅಭಿಮಾನಿಗಳು , ಬೆಂಬಲಿಗರು ಸೋಶಿಯಲ್ ಮೀಡಿಯಾದಲ್ಲಿ ಶುಭ ಕೋರಿದ್ದಾರೆ.