ಶಿವಮೊಗ್ಗ: ಚಂದ್ರಯಾನ್-3 ಯೋಜನೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ವಿಜ್ಞಾನಿಗಳ ಈ ಕಾರ್ಯವನ್ನು ಭಾರತೀಯರು ಸೇರಿ ಇಡೀ ವಿಶ್ವವೇ ಕೊಂಡಾಡುತ್ತಿದೆ. ಈ ಯೋಜನೆಯಲ್ಲಿ ಶಿವಮೊಗ್ಗದ ವಿಜ್ಞಾನಿಯೊಬ್ಬರು ಕಾರ್ಯನಿರ್ವಹಿಸಿರುವುದು ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ.
ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಮೂಲದ ಕೆ.ಎಲ್.ಶಿವಾನಿ ಅವರು ಇಸ್ರೋದ ಚಂದ್ರಯಾನ್-3 ಯೋಜನೆಯ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಸ್ರೋದ ಟೆಲಿಮೆಟ್ರಿ ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್‌ವರ್ಕ್ ವಿಭಾಗದ ಡೆಪ್ಯೂಟಿ ಡೈರೆಕ್ಟರ್ ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಇದನ್ನೂ ಓದಿ: ‘ಮುತ್ತಯ್ಯ ಮುರಳೀಧರನ್ ಕಂಪನಿಯಲ್ಲಿ ನಮ್ಮ ಯುವಕರಿಗೆ ಅನ್ಯಾಯವಾಗಲು ಬಿಡಲ್ಲ’
ವಿಜ್ಞಾನಿ ಕೆ.ಎಲ್.ಶಿವಾನಿ ಅವರು ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರ ಪುತ್ರಿಯಾಗಿದ್ದಾರೆ. ಚಂದ್ರಯಾನ್-3 ಯಶಸ್ವಿ ಆಗುತ್ತಿದ್ದಂತೆ ಕೋಣಂದೂರು ಲಿಂಗಪ್ಪ ಅವರಿಗೆ ಸಂಬಂಧಿಗಳು, ಸ್ನೇಹಿತರು, ಹಿತೈಷಿಗಳು ಸೇರಿ ಸಾರ್ವಜನಿಕರು ಕರೆ ಮಾಡಿ ಶುಭಕೋರುತ್ತಿದ್ದಾರೆ.
ಇಸ್ರೋ ವಿಜ್ಞಾನಿ ಕೆ.ಎಲ್.ಶಿವಾನಿ ಅವರು ಶಿವಮೊಗ್ಗದ ಜವಾಹರಲಾಲ್ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯಾಗಿದ್ದರು. 1992ರಲ್ಲಿ ಈ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಪದವಿ ಪಡೆದರು. 1993ರಲ್ಲಿ ಡಾ. ಯು.ಆರ್.ರಾವ್ ಅವರು ಇಸ್ರೋದ ಅಧ್ಯಕ್ಷರಾಗಿದ್ದಾಗ ಸಂಸ್ಥೆಗೆ ಸೇರಿದ್ದರು. ಅಂದಿನಿಂದ ಬಾಹ್ಯಾಕಾಶದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಚಂದ್ರಯಾನ-3ಯಶಸ್ವಿಯಾಗುತ್ತಿದ್ದಂತೆ ಕೆ.ಎಲ್.ಶಿವಾನಿ ಅವರ ಕುಟುಂಬದವರು, ಸ್ನೇಹಿತರು ಅಭಿನಂದನೆ ತಿಳಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.