ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ನಾನು ಅವತ್ತೇ ಧೈರ್ಯವಾಗಿ ಹೇಳಿದ್ದೆ

ಬೆಳಗಾವಿ : ಧರ್ಮಸ್ಥಳ ವಿರುದ್ಧ ನಡೆದ ಷಡ್ಯಂತ್ರದ ಬಗ್ಗೆ ನಾನು ಅಂದೇ ಧೈರ್ಯದಿಂದ ಹೇಳಿದ್ದೆ ಎಂದು ಡಿ.ಕೆ.ಶಿವಕುಮಾರ್ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಮಾತ್ರವಲ್ಲದೇ ಈ ಷಡ್ಯಂತ್ರಕ್ಕೆ ಕಾರಣ ಏನು ಎಂದು ಸಹ ಉಲ್ಲೇಖಿಸಿದ್ದೆ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ನೀವು ಷಡ್ಯಂತ್ರ ನಡೆದಿದೆ ಎಂದು ಈ ಹಿಂದೆ ಹೇಳಿದ್ದೀರಿ. ಈಗ ಸಿಕ್ಕಿರುವ ಚಾರ್ಜ್ ಶೀಟ್ ನಲ್ಲಿ ದೂರುದಾರರೇ ಆರೋಪಿಗಳು ಎನ್ನುವ ಮಾಹಿತಿ ಇದೆ ಎಂದು ಕೇಳಿದಾಗ, ನನಗೆ ಧರ್ಮಸ್ಥಳದ ಇತಿಹಾಸ ಗೊತ್ತು ಹಾಗೂ ಅವರು ಯಾರೂ ಸಹ ಈ ರೀತಿ ಮಾಡುವುದಿಲ್ಲ ಎನ್ನುವುದೂ ಗೊತ್ತಿತ್ತು. ಆದ ಕಾರಣಕ್ಕೆ ನಾನು ಧೈರ್ಯದಿಂದ ಈ ವಿಚಾರವನ್ನು ಹೇಳಿದ್ದೆ ಎಂದರು.

ಚಾರ್ಜ್ ಶೀಟ್ ಪ್ರತಿಯಲ್ಲಿ ಏನಿದೆ ಎಂದು ನಾನು ಓದಿಲ್ಲ. ಸರ್ಕಾರ ಕಾನೂನಿನ ಅಡಿ ಏನು ಕ್ರಮ ತೆಗೆದುಕೊಳ್ಳಬೇಕು ಅದು ನಡೆಯುತ್ತದೆ. ಅಂತಿಮವಾಗಿ ಸತ್ಯ ಹೊರಗಡೆ ಬಂದಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡುವಿನ ಆಳವಾದ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಈ ಪಿತೂರಿ ನಡೆದಿದೆ ಎಂದು ಅಚ್ಚರಿಯ ಮಾತನಾಡಿದರು.

ವೀರೇಂದ್ರ ಹೆಗ್ಗಡೆ ಅವರ ಕಷ್ಟಕಾಲದಲ್ಲಿ ನಾನು ತೆಗೆದುಕೊಂಡ ಒಂದು ನಿರ್ಧಾರದಿಂದ ಇಡೀ ದೇಶದ ಜೈನ ಸಮುದಾಯದವರು ನೀವು ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೀರೇಂದ್ರ ಹೆಗಡೆ ಅವರ ಮೇಲೆ ಯಾವ ರೀತಿ ಷಡ್ಯಂತ್ರ ಆಯಿತು. ಆಗ ಅವರ ಕಷ್ಟಕಾಲದಲ್ಲಿ ನಾವು ತೆಗೆದುಕೊಂಡ ನಿರ್ಧಾರವನ್ನು ರಾಷ್ಟ್ರೀಯ, ರಾಜ್ಯ ಮಾಧ್ಯಮಗಳು ಹಾಗೂ ಅನೇಕ ನಾಯಕರುಗಳು ಪ್ರಶ್ನೆ ಮಾಡಿದರು.

ನಾನು ಯಾವ ಒತ್ತಡಕ್ಕೂ ಮಣಿಯುವುದಿಲ್ಲ, ನನ್ನ ಅನುಭವ ಹಾಗೂ ಏನನ್ನು ತಿಳಿದಿದ್ದೇನೋ ಅದನ್ನು ಹೇಳಿದ್ದೇನೆ ಎಂದು ಹೇಳಿದ್ದೆ. ದೂರದಾರರೇ ಆರೋಪಿಗಳಾಗಿ ಉಲ್ಲೇಖಿಸಿರುವ ಚಾರ್ಜ್‌ ಶೀಟ್‌ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದ್ದರು. ನಾನು ಏನು ಹೇಳಬೇಕೋ ಅದನ್ನು ನೀವೇ ವ್ಯಾಖ್ಯಾನ ಮಾಡಿ ಎಂದಷ್ಟೇ ಉತ್ತರಿಸಿದ್ದೇನೆ ಎಂದರು.

ಶಾಂತಿ, ಸಹನೆ, ಅಹಿಂಸೆ, ತ್ಯಾಗದ ಸಂಕೇತ ಜೈನ ಸಮುದಾಯದವರು. ನಿಮಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದ್ದೂ ಸಹ ಕಾಂಗ್ರೆಸ್‌ ಸರ್ಕಾರ. ಜೈನ ಸಮುದಾಯದ ಜೊತೆ ಯಾವಾಗಲೂ ಇದ್ದೇನೆ ಎಂದು ಹೇಳುತ್ತೇನೆ. ಜೈನರ ಪದ್ದತಿ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದೀರಿ. ಮಾನ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಮಾತಿನ ಮೇಲೆ ನಂಬಿಕೆ ಇಡೋಣ” ಎಂದರು.

ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ಈ ವಿಚಾರದಲ್ಲಿ ನಾವು ನಂಬಿಕೆಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದರು.

Leave a Reply

Your email address will not be published. Required fields are marked *