ಮೈಸೂರು : ಆಗಸ್ಟ್ 30ರಂದು ನಗರದಲ್ಲಿ ‘ಗೃಹಲಕ್ಷ್ಮಿ’ ಯೋಜನೆಗೆ ಅಧಿಕೃತ ಚಾಲನೆ ಸಿಗಲಿದ್ದು, ಈ ಹಿಂದೆ ಬೆಳಗಾವಿಯಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮ ಮೈಸೂರಿಗೆ ಶಿಫ್ಟ್ ಆಗಿದೆ. ಈ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಈ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ಬೆಳಗಾವಿಯಲ್ಲಿ ಮುಂದೆ ಇನ್ನೊಂದು ಕಾರ್ಯಕ್ರಮ ಮಾಡಲು ಪ್ಲಾನ್ ಮಾಡುತ್ತಿದ್ದೇವೆ. ಎಲ್ಲರ ಒಮ್ಮತದ ತೀರ್ಮಾನದಿಂದ ಮೈಸೂರಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಮೈಸೂರಿನಲ್ಲಿ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡುವ ಯೋಚನೆ ಇತ್ತು. ಆದರೆ, ಅಕ್ಕಿ ವಿಚಾರದಲ್ಲಿ ಒಂದಷ್ಟು ಅಡೆತಡೆ ಇದೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆಯನ್ನು ಇಲ್ಲಿಂದ ಆರಂಭಿಸುತ್ತಿದ್ದೇವೆ ಎಂದರು.
ಬೆಂಗಳೂರಿನಲ್ಲೂ ಕಾರ್ಯಕ್ರಮ ಮಾಡುವ ಯೋಚನೆ ಮಾಡಿದ್ದೇವೆ. ಆದರೆ, ಟ್ರಾಫಿಕ್ ಸಮಸ್ಯೆ ಉಂಟಾಗುತ್ತವೆ ಎಂದು ಮೈಸೂರಿಗೆ ಶಿಫ್ಟ್ ಮಾಡಿದ್ದೇವೆ. ಆಗಸ್ಟ್ 30ರಂದು ಒಂದು ಬಟನ್ ಒತ್ತಿದ ಕೂಡಲೇ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗುತ್ತದೆ. ಅದರ ಮೇಸೆಜ್ ಗಳು ಅವರ ಮೊಬೈಲ್ ನಂಬರ್ ಗಳಿಗೆ ಬರುತ್ತದೆ. ನಮ್ಮಲ್ಲಿ ಹಣದ ಕೊರತೆ ಇಲ್ಲ. ಯೋಜನೆಯ ಹಣವನ್ನು ಈಗಾಗಲೇ ಬ್ಯಾಂಕ್ ಗೆ ಡೆಪಾಸಿಟ್ ಮಾಡಿದ್ದೇವೆ. ಸರ್ವರ್ ಸಮಸ್ಯೆ ಆದರೆ ಒಂದಿಷ್ಟು ಜನರಿಗೆ ಹಣ ಬರುವುದು ತಡವಾಗಬಹುದು ಅಷ್ಟೆ ಎಂದು ಹೇಳಿದರು.
ಇದನ್ನೂ ಓದಿ : ‘ಗೃಹಲಕ್ಷ್ಮಿ’ ಜಾರಿಗೆ ಭರ್ಜರಿ ತಯಾರಿ; ಮೈಸೂರಲ್ಲಿಂದು ಡಿಸಿಎಂ ಸಭೆ!
ಗೃಹಲಕ್ಷ್ಮಿ ಯೋಜನೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿ ಬರುತ್ತದೆ. ಹಾಗಾಗಿ, ಹೆಬ್ಬಾಳ್ಕರ್ ಅವರ ತವರು ಜಿಲ್ಲೆ ಬೆಳಗಾವಿಯಲ್ಲೇ ಯೋಜನೆಗೆ ಚಾಲನೆ ನೀಡಲು ಪ್ಲಾನ್ ಮಾಡಲಾಗಿತ್ತು. ಆದರೆ, ಈಗ ಕಾರ್ಯಕ್ರಮ ಮೈಸೂರಿಗೆ ಸ್ಥಳಾಂತರ ಮಾಡಲಾಗಿದೆ.
ರಾಜ್ಯದ ಸುಮಾರು 1,09,54,000 ಮಹಿಳೆಯರ ಖಾತೆಗೆ ತಲಾ 2,000 ರೂ. ಜಮಾ ಮಾಡಲಾಗುತ್ತದೆ. ಈ ಯೋಜನೆಯಡಿ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ಸುಮಾರು 13,81,430ಕ್ಕೂ ಹೆಚ್ಚು ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದಾರೆ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.