ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಹಲವು ಸಂಘಟನೆಗಳು ತಮಿಳುನಾಡಿಗೆ ನೀರು ಬಿಡದಂತೆ ಹೋರಾಟ ನಡೆಸ್ತಿವೆ, ಅವರಿಗೆ ಧನ್ಯವಾದಗಳು. ಆದರೆ, ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಈ ಸಂಘಟನೆಗಳು ಎಲ್ಲಿ ಹೋಗಿದ್ವು’ ಎಂದು ಪ್ರಶ್ನಿಸಿದರು.
‘ಮೇಕೆದಾಟು ಯೋಜನೆಗೆ ಅನುಮತಿ ಕೊಡಬೇಕು ಎಂದು ಸಂಘಟನೆಗಳು ಆಗ ಯಾಕೆ ಕೇಂದ್ರಕ್ಕೆ ಕೇಳಲಿಲ್ಲ? ಬಿಜೆಪಿ, ಜೆಡಿಎಸ್ ಪಕ್ಷದವರೂ ಕೇಂದ್ರದ ಬಳಿ ಅನುಮತಿಗೆ ಯಾಕೆ ಕೇಳ್ತಿಲ್ಲ? ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ಅನುಮತಿ ಕೊಡಿ ಎಂದು ಹೋರಾಟಗಾರರು ಕೇಂದ್ರಕ್ಕೆ ಕೇಳಲಿ; ನಾವು ನಮ್ಮ ರೈತರ ಹಿತ ಕಾಪಾಡಲು ಬದ್ಧರಾಗಿದ್ದೇವೆ’ ಎಂದರು.
ಇದನ್ನೂ ಓದಿ; ಕಾವೇರಿ ನೀರು ಹಂಚಿಕೆ ವಿವಾದ; ಸುಪ್ರೀಂಗೆ ಪ್ರತ್ಯೇಕ ಅರ್ಜಿ ಸಲ್ಲಿಸಲು ಮುಂದಾದ ರೈತ ಸಂಘ!
‘ತಮಿಳುನಾಡು ಸರ್ಕಾರ 20 ಸಾವಿರ ಕ್ಯೂಸೆಕ್ ನೀರಿಗೆ ಬೇಡಿಕೆ ಇಟ್ಟಿತ್ತು. ನಾವು ಆಗಲ್ಲ ಅಂದ್ವಿ, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ 5 ಸಾವಿರ ಕ್ಯೂಸೆಕ್ ನೀರು ಹರಿಸ್ತಿದ್ದೀವಿ. ಕೋರ್ಟ್ ನಲ್ಲಿ ನಮ್ಮ ವಕೀಲರು ಉತ್ತಮ ವಾದ ಮಾಡ್ತಿದ್ದಾರೆ. ನಾನೂ ಕೂಡಾ ದೆಹಲಿಗೆ ಹೋಗಿ ವಕೀಲರ ಜತೆ ಮಾತನಾಡಿದ್ದೇನೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಬಂದು ವಸ್ತುಸ್ಥಿತಿಯ ಅಧ್ಯಯನ ನಡೆಸುವಂತೆ ಕೇಳಿಕೊಂಡಿದ್ದೇವೆ. ಸುಪ್ರೀಂ ಕೋರ್ಟ್ ನಲ್ಲೂ ಮೇಲ್ಮನವಿ ಸಲ್ಲಿಸಿ, ನೀರು ಬಿಡಲು ಆಗಲ್ಲ ಅಂತ ಮನವಿ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.
ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ‘ಇದರ ಬಗ್ಗೆ ತಮಿಳು ಸರ್ಕಾರವೇ ಸ್ಪಷ್ಟನೆ ಕೊಡುತ್ತೆ’ ಎಂದು ಮಾತು ಮುಗಿಸಿದರು.
ಕಾಂಗ್ರೆಸ್ ನಿಂದ ಬ್ಲಾಕ್ ಮೇಲ್ ನಡೆಯುತ್ತಿದೆ ಎಂಬ ಅಶ್ವತ್ಥ ನಾರಾಯಣ ಆರೋಪಕ್ಕೆ ಉತ್ತರಿಸಿ, ‘ಹೋ.. ಬ್ಲಾಕ್ ಮೇಲ್ ಅಂತ ಅಂದಿದ್ದಾರಾ? ಇದು ನವರಂಗಿ ನಾರಾಯಣನ ಮಾತು; ನವರಂಗಿ ನಾರಾಯಣನಿಗೆ ನಮ್ಮ ಎಂ.ಬಿ ಪಾಟೀಲ್ ತಕ್ಕ ಉತ್ತರ ಕೊಟ್ಟಿದ್ದಾರೆ’ ಎಂದು ಕಾಲೆಳೆದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.