ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಳೆದ ವರ್ಷ ಹಮ್ಮಿಕೊಂಡಿದ್ದ ಭಾರತ್ ಜೋಡೋ ಯಾತ್ರೆಯು ಇದೇ ಸೆಪ್ಟೆಂಬರ್ 7ಕ್ಕೆ ಒಂದು ವರ್ಷ ಪೂರೈಸುತ್ತಿದ್ದು, ಇದರ ನೆನಪಾರ್ಥ ರಾಜ್ಯದಲ್ಲಿ ಪಾದಯಾತ್ರೆ ಮಾಡಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ರಾಜ್ಯ ಸಚಿವ ಸಂಪುಟ ಸಭೆ ಬಳಿಕ ಸಚಿವರಿಂದ ಆಯಾ ಜಿಲ್ಲೆಗಳಲ್ಲಿ ಆ ದಿನ ಸಂಜೆ 5 ಗಂಟೆಗೆ ಪಾದಯಾತ್ರೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರು ರಾಮನಗರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.
ಜನರಿಗೆ ಸಮಸ್ಯೆ ಆಗಬಾರದೆಂದು ಬೆಂಗಳೂರಿನಲ್ಲಿ ಪಾದಯಾತ್ರೆ ನಡೆಸುತ್ತಿಲ್ಲ. ಉಳಿದಂತೆ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಯುತ್ತದೆ. ಒಂದು ಗಂಟೆಗಳ ಕಾಲ ಪಾದಯಾತ್ರೆ ನಡೆಸಲು ನಿರ್ಧಾರ ಮಾಡಿದ್ದೇವೆ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿವಿಧ ಸಂಘಟನೆಗಳು ಹೋರಾಟ ಮಾಡುತ್ತಿರುವುದಕ್ಕೆ ಧನ್ಯವಾದ. ಕಳೆದ ಬಾರಿ ನಾವು ಮೇಕೆದಾಟು ಪಾದಯಾತ್ರೆ ನಡೆಸಿದಾಗ ಈ ಸಂಘಟನೆಗಳು ಎಲ್ಲಿದ್ದವು? ಆಗ ಏಕೆ ಯೋಜನೆಗೆ ಅನುಮತಿ ನೀಡಿ ಎಂದು ಕೇಂದ್ರ ಸರ್ಕಾರವನ್ನು ಕೇಳಲಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ರಾಹುಲ್ ನೇತೃತ್ವದಲ್ಲಿ ಎರಡನೇ ಭಾರತ್ ಜೋಡೋ ಯಾತ್ರೆ ಫಿಕ್ಸ್
ಬಿಜೆಪಿ, ಜೆಡಿಎಸ್ ಕೂಡ ಕೇಂದ್ರದ ಬಳಿ ಈ ಯೋಜನೆಗೆ ಅನುಮತಿ ಕೇಳುತ್ತಿಲ್ಲ. ನಮ್ಮ ಸರ್ಕಾರ ರೈತರ ಹಿತ ಕಾಪಾಡಲು ಬದ್ಧವಾಗಿದೆ. ತಮಿಳುನಾಡು 20 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುವಂತೆ ಆಗ್ರಹಿಸಿತ್ತು. ಆದರೆ, ಸುಪ್ರೀಂಕೋರ್ಟ್ ಆದೇಶದ ಮೇರೆಗೆ 5 ಸಾವಿರ ಕ್ಯೂಸೆಕ್ ನೀರು ಹರಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.