ಬೆಂಗಳೂರು : ರಾಜ್ಯದಲ್ಲಿ ತಲೆದೂರಿರುವ ಬರ ಪರಿಸ್ಥಿತಿಯ ಕುರಿತು ಚರ್ಚಿಸಿ, ಮಳೆ ಇಲ್ಲದೆ ತತ್ತರಿಸಿ ಹೋಗಿರುವ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವ ಸಂಬಂಧ ಇಂದು ಸಂಪುಟ ಉಪ ಸಮಿತಿ ಸಭೆ ನಡೆಯಲಿದೆ.
ಕಂದಾಯ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆಯಲಿರುವ ಸಭೆಯಲ್ಲಿ ಬೆಳೆಹಾನಿ, ಬರ ಘೋಷಣೆ ಸಂಬಂಧಿಸಿದ ಚರ್ಚೆಯಾಗಲಿದೆ. ಈ ಮೊದಲು ಸೆಪ್ಟೆಂಬರ್ 11ರೊಳಗೆ ಬೆಳೆ ಹಾನಿ ಸೇರಿದಂತೆ ಬರದ ವಿಷಯದ ಬಗ್ಗೆ ಮರು ಸರ್ವೇ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿತ್ತು.
ಇದನ್ನೂ ಓದಿ : ಕಾವೇರಿ ಜಲ ವಿವಾದ : ಇಂದು ಸರ್ವಪಕ್ಷಗಳ ತುರ್ತು ಸಭೆ
ಇಂದಿನ ಸಭೆಯಲ್ಲಿ ಕೇಂದ್ರಕ್ಕೆ ಬರ ಪೀಡಿತ ತಾಲೂಕುಗಳ ಘೋಷಣೆಗಾಗಿ ಶಿಫಾರಸ್ಸನ್ನು ಕಳುಹಿಸುವುದು. ರಾಜ್ಯ ಸರ್ಕಾರದಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚೆ ನಡೆಸಿ , ಇಂದೇ ಬರಪೀಡಿತ ಪ್ರದೇಶಗಳ ಘೋಷಣೆಯಾಗುವ ಸಾಧ್ಯತೆ ಇದೆ.
ಸಭೆಯಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸರ್ಕಾರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಕಟ್ಟುನಿಟ್ಟಿನ ನಿಯತಾಂಕಗಳ ಪಾಲನೆ :
ಕಳೆದ ಸೆಪ್ಟೆಂಬರ್ 4ರಂದು ಈ ವಿಚಾರವಾಗಿ ಮಾಧ್ಯಮಗಳಿಗೆ ತಿಳಿಸಿದ್ದ ಸಚಿವ ಕೃಷ್ಣಭೈರೇಗೌಡ, ಕೇಂದ್ರ ಸರ್ಕಾರ ಬರ ಕೈಪಿಡಿ ಅಡಿಯಲ್ಲಿ ರಾಜ್ಯಗಳಿಗೆ ಬರ ಘೋಷಣೆ ಮಾಡಲು ಕಟ್ಟುನಿಟ್ಟಿನ ನಿಯತಾಂಕಗಳನ್ನು ನಿಗದಿಪಡಿಸಿದೆ ಎಂದಿದ್ದರು.
ಪ್ಯಾರಾಮೀಟರ್‌ಗಳ ಪ್ರಕಾರ, ಆಗಸ್ಟ್ 18 ರಂದು ರಾಜ್ಯದ 113 ತಾಲ್ಲೂಕುಗಳನ್ನು ತಾತ್ಕಾಲಿಕವಾಗಿ ಬರಪೀಡಿತ ಎಂದು ಪಟ್ಟಿ ಮಾಡಲಾಗಿದೆ. ಜಿಲ್ಲೆಗಳಲ್ಲಿ ಬೆಳೆ ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಮತ್ತು ವರದಿಗಳನ್ನು ಸಂಗ್ರಹಿಸಲಾಗುತ್ತಿದೆ. ಕನಿಷ್ಠ ಮೂರು ವಾರಗಳವರೆಗೆ ನಿರಂತರ ಮಳೆಯ ಕೊರತೆಯು 60% ಕ್ಕಿಂತ ಹೆಚ್ಚಿರಬೇಕು. ತಾಲೂಕುಗಳನ್ನು ಪಟ್ಟಿಗೆ ಸೇರಿಸುವ ಕುರಿತು ಸಂಪುಟ ಉಪ ಸಮಿತಿ ನಿರ್ಧರಿಸಲಿದೆ. ಅಗತ್ಯ ಬಿದ್ದರೆ ಸಚಿವ ಸಂಪುಟದ ಗಮನಕ್ಕೆ ತಂದು ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು.
ಆಗಸ್ಟ್ 31 ರೊಳಗೆ 75 ಬರಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸಲಾಗುತ್ತಿದ್ದು, ಸಮೀಕ್ಷೆಯ ವರದಿಯ ಆಧಾರದ ಮೇಲೆ ಬರಪೀಡಿತ ತಾಲ್ಲೂಕುಗಳ ಎರಡನೇ ಪಟ್ಟಿಯನ್ನು ಒಂದು ವಾರ ಅಥವಾ 10 ರಂದು ಬಿಡುಗಡೆ ಮಾಡಲಾಗುವುದು. ಬರಪೀಡಿತ ತಾಲೂಕುಗಳು ಎಂದು ಘೋಷಣೆಯಾದ ನಂತರ ತಕ್ಷಣವೇ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.