ವಿಜಯನಗರ : ಸಾಮಾನ್ಯವಾಗಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನರನ್ನು ತಮ್ಮ ಪಕ್ಷಗಳತ್ತ ಸೆಳೆಯಲು ರಾಜಕಾರಣಿಗಳು ನಾನಾ ಕಸರತ್ತುಗಳನ್ನು ನಡೆಸುತ್ತಾರೆ. ಅದೇ ರೀತಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೊಸಪೇಟೆ ನಗರಸಭೆ ಸದಸ್ಯರು, ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ದೀಪಾವಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
ಸಚಿವ ಆನಂದ್ ಸಿಂಗ್ ಜನಪ್ರತಿನಿಧಿಗಳನ್ನು ಮನವೊಲಿಸಲು ಒಡವೆ, ನಗದು ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಸ್ವಕ್ಷೇತ್ರದ ಜನಪ್ರತಿನಿಧಿಗಳ ಮನವೊಲಿಸಲು ಸಚಿವ ಆನಂದ್ ಸಿಂಗ್ ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ.
ಹೊಸಪೇಟೆ ನಗರಸಭೆ ಸದಸ್ಯರಿಗೆ 1 ಲಕ್ಷ ರೂಪಾಯಿ ನಗದು, 1 ಕೆ.ಜಿ ಬೆಳ್ಳಿ, ರೇಷ್ಮೆ ಸೀರೆ, ಪಂಚೆ, ಅಂಗಿ, ಮುತ್ತಿನ ಹಾರ ಹಾಗೂ ಡ್ರೈ ಫ್ರೂಟ್ಸ್ ಡಬ್ಬಿ ಒಳಗೊಂಡ ಕಿಟ್ ಅನ್ನು ಕೊಟ್ಟಿದ್ದಾರೆ.
ಪಂಚಾಯಿತಿಯ ಒಬ್ಬ ಸದಸ್ಯರಿಗೆ ತಲಾ 27 ಸಾವಿರ ರೂಪಾಯಿ ನಗದು, 500 ಗ್ರಾಂ ಬೆಳ್ಳಿ ಅದರೊಂದಿಗೆ ದೀಪಾವಳಿ ಹಬ್ಬದ ಶ್ರೀ ಲಕ್ಷ್ಮಿ ಪೂಜಾ ಆಮಂತ್ರಣ ಪತ್ರಿಕೆ ಎಂದು ಬರೆದ ಆಹ್ವಾನವನ್ನು ನೀಡಿದ್ದಾರೆ. ಸಚಿವರ ಈ ಗಿಫ್ಟ್ ಸಾಮಾಜಿಕ ಜಾಲತಾಣದಲ್ಲಿ ಇದೀಗ ಎಲ್ಲೆಡೆ ವೈರಲ್ ಆಗಿದೆ.