Monday, December 11, 2023
spot_img
- Advertisement -spot_img

ಕಾಂಗ್ರೆಸ್ ಬ್ಲಾಸ್ಟ್‌ ಆಗುವುದು ಖಚಿತ, ನಿಶ್ಚಿತ : ಬಿಜೆಪಿ

ಬೆಂಗಳೂರು : ತನ್ನ ಮನೆಯೊಳಗಿನ ಕಿಚ್ಚನ್ನೇ ನಿಯಂತ್ರಿಸಲು ವಿಫಲವಾಗಿರುವ ಕಾಂಗ್ರೆಸ್‌, ಬೇರೆಯವರ ಬಗ್ಗೆ ಚಿಂತೆ ಮಾಡ್ತಿದೆ ಎಂದು ಬಿಜೆಪಿ ಟಾಂಗ್ ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ನಲ್ಲಿ ಶಾಸಕರು, ಸಚಿವರ ನಡುವೆ ಆಂತರಿಕ ಕಲಹವಿದೆ ಎಂದು ಆರೋಪಿಸಿದ್ದು, ಈ ಜಿಲ್ಲಾವಾರು ಪಟ್ಟಿ ಬಿಡುಗಡೆ ಮಾಡಿದೆ.

ಕಲ್ಬುರ್ಗಿ : ಟ್ರೋಲ್‌ ಮಿನಿಸ್ಟರ್‌ ಪ್ರಿಯಾಂಕ್‌ ಖರ್ಗೆ ಅವರಿಗೆ ಸಚಿವ ಸ್ಥಾನ ನೀಡಿದ್ದು, ಕಲ್ಬುರ್ಗಿ ಜಿಲ್ಲೆಯ ಉಳಿದ ಕೈ ಶಾಸಕರಿಗೆ ಹಿಡಿಸಿಲ್ಲ. ಬಿ.ಆರ್. ಪಾಟೀಲ್‌ ಸರ್ಕಾರದ ವಿರುದ್ಧವೇ ಪತ್ರ ಬರೆದರೆ, ಅಜಯ್‌ ಸಿಂಗ್‌ ಪಕ್ಷದ ಚಟುವಟಿಕೆಗಳಿಂದ ದೂರ ದೂರ.

ರಾಯಚೂರು : ಶಾಸಕರೇ ಅಲ್ಲದ ಬೋಸರಾಜುಗೆ ಸಚಿವ ಸ್ಥಾನ ನೀಡಿದ್ದಕ್ಕೆ, ರಾಯಚೂರು ಕೈ ಶಾಸಕರು ರಾಜೀನಾಮೆ ಬೆದರಿಕೆ ಹಾಕಿದ್ದಾರೆ, ಅನುದಾನದ ಆಸೆ ತೋರಿಸಿ, ಸಿಎಂ ಸಿದ್ದರಾಮಯ್ಯ ತೇಪೆ ಹಚ್ಚಿದ್ದಾರೆ.

ಧಾರವಾಡ : ಸಂತೋಷ್‌ ಲಾಡ್‌ರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ, ಡಿ.ಕೆ ಶಿವಕುಮಾರ್‌ ಬಣದ ವಿನಯ್‌ ಕುಲಕರ್ಣಿ ಹಾಗೂ ಪರಮೇಶ್ವರ್‌ ಬಣದ ಪ್ರಸಾದ್‌ ಅಬ್ಬಯ್ಯ ನಿಗಿ ನಿಗಿ ಕೆಂಡ ಕಾರುತ್ತಿದ್ದಾರೆ.

ಶಿವಮೊಗ್ಗ : ನಿನ್ನೆ ಮೊನ್ನೆ ಬಂದ ಮಧು ಬಂಗಾರಪ್ಪರಿಗೇಕೆ ಮಂತ್ರಿಗಿರಿ ಎಂದು ಸಿದ್ದರಾಮಯ್ಯ ಬಣದ ಭದ್ರಾವತಿಯ ಸಂಗಮೇಶ್‌ ಗುರ್‌ ಎನ್ನುತ್ತಿದ್ದಾರೆ.

ದಾವಣಗೆರೆ : ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಭ್ರಷ್ಟಾಚಾರಕ್ಕೆ ಬೇಸತ್ತು, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು ರಾಜೀನಾಮೆ ಬಿಸಾಡಿ ಹೊರಹೋಗುವ ಮಾತನಾಡಿದ್ದಾರೆ.

ಕೊಪ್ಪಳ : ಶಿವರಾಜ್‌ ತಂಗಡಗಿರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ, ಶಾಸಕ ಬಸವರಾಜ ರಾಯರೆಡ್ದಿ, ಸರ್ಕಾರದ ಭ್ರಷ್ಟಾಚಾರವನ್ನು ಹೋದಲ್ಲಿ ಬಂದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ.

ಬೆಳಗಾವಿ : ಸಿದ್ದರಾಮಯ್ಯ ಬಣದ ಸತೀಶ್‌ ಜಾರಕಿಹೊಳಿಯವರಿಗೂ ಹಾಗೂ ಡಿ.ಕೆ. ಶಿವಕುಮಾರ್‌ ಬಣದ ಲಕ್ಷ್ಮಿ ಹೆಬ್ಬಾಳ್ಕರ್‌‌ಗೂ ಹುಸಿ ಮುನಿಸು, ಕಾಂಗ್ರೆಸ್ಸಿಗೆ ಬೆಳಗಾವಿ ಸೂತ್ರ ಹರಿದ ಗಾಳಿಪಟವಾಗಿದೆ.

ಬೆಂಗಳೂರು : ಡಿಸಿಎಂ ಡಿ.ಕೆ. ಶಿವಕುಮಾರ್‌‌ರವರ ಏಕಪಕ್ಷೀಯ ನಡೆಗಳಿಗೆ ಬೇಸತ್ತು, ಬೆಂಗಳೂರು ಕೈ ಶಾಸಕರು, ಡಿ.ಕೆ. ಶಿವಕುಮಾರ್‌‌ರವರ ಸಿಟಿ ರೌಂಡ್ಸ್‌ಗೆ ಚಕ್ಕರ್‌ ಹಾಕುತ್ತಿದ್ದಾರೆ.

ಇದೆಲ್ಲದರ ನಡುವೆ ತಮಗೆ ಮಂತ್ರಿಗಿರಿ ತಪ್ಪಿಸಿದರು ಎಂಬ ಕಾರಣಕ್ಕೆ, ಡಿ.ಕೆ. ಶಿವಕುಮಾರ್‌‌ರವರ ಸಂಪೂರ್ಣ ಸಹಕಾರದೊಂದಿಗೆ ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್, ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಟೈಂ ಬಾಂಬ್‌ ಇಟ್ಟಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಬ್ಲಾಸ್ಟ್‌ ಆಗುವುದು ಖಚಿತ ಹಾಗೂ ನಿಶ್ಚಿತ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಸಪ್ಟೆಂಬರ್ 1ರಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕರೆದಿದ್ದ ಸಭೆಗೆ ರಾಜ್ಯ ಬಿಜೆಪಿ ನಾಯಕರಲ್ಲಿ ಬಹುತೇಕ ಮಂದಿ ಗೈರಾಗಿದ್ದರು. ಈ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಕಾಂಗ್ರೆಸ್, ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ, ರಾಜ್ಯಾಧ್ಯಕ್ಷನ ಆಯ್ಕೆ ಆಗಿಲ್ಲ ಎಂದು ಸ್ವತಃ ಬಿಜೆಪಿ ಶಾಸಕರು, ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ.

ಬಿ.ಎಲ್ ಸಂತೋಷ್ ಅವರು ಮಾತ್ರ ಈ ಬಗ್ಗೆ ಮಾತೇ ಆಡಬೇಡಿ ಎಂದು ಫಾರ್ಮಾನು ಹೊರಡಿಸಿದ್ದಾರೆ. ಇದರ ಅರ್ಥ ವಿರೋಧ ಪಕ್ಷದ ನಾಯಕನ ಆಯ್ಕೆ ಸದ್ಯಕ್ಕಂತೂ ಸಾಧ್ಯವಿಲ್ಲ ಎನ್ನುವುದಾಗಿದೆ. ತಮ್ಮಲ್ಲಿನ ಹುಳುಕುಗಳೇ ಕೊಳೆತು ನಾರುತ್ತಿದೆ, ಅದನ್ನು ಸರಿಪಡಿಸುವ ಯೋಗ್ಯತೆ ಇಲ್ಲದವರು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಸಾಧಿಸುವುದಾದರೂ ಏನು! ಎಂದು ಪ್ರಶ್ನಿಸಿತ್ತು. ಈ ಟ್ವೀಟ್ ಗೆ ಬಿಜೆಪಿ ತಿರುಗೇಟು ಕೊಟ್ಟಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles