ನವದೆಹಲಿ: ದೆಹಲಿಯಲ್ಲಿ ಶಾಸಕರ, ಸಚಿವರ ವೇತನವನ್ನು ಹೆಚ್ಚಿಸಲಾಗಿದೆ, ಶಾಸಕರ ವೇತನ ತಿಂಗಳಿಗೆ 54,000 ರೂ. ಯಿಂದ 90,000 ರೂ.ಗೆ ಏರಿಕೆಯಾಗಿದೆ.
ಮುಖ್ಯಮಂತ್ರಿ, ಸಚಿವರು, ಸ್ಪೀಕರ್, ಉಪಸಭಾಪತಿ, ಮುಖ್ಯ ಸಚೇತಕರು ಮತ್ತು ವಿರೋಧ ಪಕ್ಷದ ನಾಯಕರ ಸಂಬಳ ಮಾಸಿಕವಾಗಿ 72,000 ರೂ. ಯಿಂದ 1,70,000 ರೂ.ಗೆ ಏರಿಕೆಯಾಗಿದೆ.ಮಾರ್ಚ್ 17 ರಿಂದ ಪ್ರಾರಂಭವಾಗಲಿರುವ ದೆಹಲಿ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ, ಶಾಸಕರು ಮತ್ತು ಸಚಿವರ ಸಂಬಳ ಮತ್ತು ಭತ್ಯೆಗಳನ್ನು ಶೇ 66ಕ್ಕಿಂತ ಜಾಸ್ತಿ ಹೆಚ್ಚಿಸಲಾಗಿದೆ.
ಶಾಸಕರ ವೇತನ ಹೆಚ್ಚಳ ಫೆಬ್ರುವರಿ 14 ರಿಂದಲೇ ಜಾರಿಗೆ ಬರಲಿದ್ದು, ರಾಷ್ಟ್ರಪತಿಗಳು ಈ ಕ್ರಮಕ್ಕೆ ಒಪ್ಪಿಗೆ ನೀಡಿದ್ದಾರೆ. ದೆಹಲಿ ಸರ್ಕಾರದ ಕಾನೂನು, ನ್ಯಾಯ ಮತ್ತು ಶಾಸಕಾಂಗ ವ್ಯವಹಾರಗಳ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ಈ ಬದಲಾವಣೆ ಪ್ರಕಟಿಸಿದೆ. 2022ರ ಜುಲೈನಲ್ಲಿ ವೇತನವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಅಂಗೀಕರಿಸಿತು. ಈ ಪ್ರಸ್ತಾವನೆಗೆ ರಾಷ್ಟ್ರಪತಿಗಳ ಒಪ್ಪಿಗೆ ದೊರೆತಿದೆ.
ಮೂಲವೇತನ, ದಿನಭತ್ಯೆ ಸೇರಿದಂತೆ ಎಲ್ಲವೂ ಹೆಚ್ಚಳ ಮಾಡಲಾಗಿದೆ. 12,000 ರೂ.ಗಳಷ್ಟಿದ್ದ ಶಾಸಕರ ಮೂಲ ವೇತನ ಈಗ 30,000 ರೂ.ಗೆ ಏರಿದೆ. ದಿನಭತ್ಯೆ 1,000 ರೂ.ನಿಂದ 1,500 ರೂ.ಗೆ ಹೆಚ್ಚಿಸಲಾಗಿದೆ. ಇದಲ್ಲದೇ, ಮುಖ್ಯಮಂತ್ರಿ, ವಿಧಾನಸಭಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರ ವೇತನ ಮತ್ತು ಭತ್ಯೆ ಪರಿಷ್ಕರಿಸಲಾಗಿದ್ದು, ಮಾಸಿಕವಾಗಿ 1.70 ಲಕ್ಷ ರೂ. ಪಡೆಯಲಿದ್ದಾರೆ. ಈ ಹಿಂದೆ ಇವರಿಗೆ ತಿಂಗಳಿಗೆ 72 ಸಾವಿರ ರೂ. ಸಿಗುತ್ತಿತ್ತು.