ತುಮಕೂರು: ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಭೇಟಿ ನೀಡಿ ಗಂಗಾಧರ ಅಜ್ಜಯ್ಯನ ಗದ್ದುಗೆ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಂಡರು.
ಬಳಿಕ ಮಾತನಾಡಿದ ಅವರು, ಅಜ್ಜಯ್ಯನ ಮೇಲೆ ಪ್ರಮಾಣ ಮಾಡು ಅಂದವರೆಲ್ಲ ಈಗ ಏನಾದ್ರು ಎಂದು ಮಾಜಿ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಪಾಪ, ಗುತ್ತಿಗೆದಾರರದ್ದು ತಪ್ಪಿಲ್ಲ, ಕೆಲ ರಾಜಕೀಯದವರು ಮಿಸ್ ಗೈಡ್ ಮಾಡಿ, ಗುತ್ತಿಗೆದಾರರ ದಿಕ್ಕುತಪ್ಪಿಸಿದರು ಎಂದು ದೂರಿದರು.
ಬಿಬಿಎಂಪಿ ಗುತ್ತಿಗೆದಾರರಿಂದ ಡಿ.ಕೆ.ಶಿವಕುಮಾರ್ ಕಮೀಷನ್ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದ ಅಶ್ವತ್ಥನಾರಾಯಣ್, ಡಿಕೆಶಿ ಅವರಿಗೆ ಧಮ್ಮು, ತಾಕತ್ ಇದ್ರೆ, ಅಜ್ಜಯ್ಯನ ಮೇಲೆ ಆಣೆ ಮಾಡಿ ತಾನು ಗುತ್ತಿಗೆದಾರರಿಂದ ಲಂಚ ಪಡೆದಿಲ್ಲ ಎಂದು ಹೇಳಲಿ ಎಂಬ ಸವಾಲು ಹಾಕಿದ್ದರು.
ಇದನ್ನೂ ಓದಿ: ಎತ್ತಿನಹೊಳೆ ಕಾಮಗಾರಿ ಪ್ರಗತಿ ಸಮಾಧಾನ ತಂದಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್
ಇದನ್ನು ಉಲ್ಲೇಖಿಸಿ ಮಾತನಾಡಿದ ಡಿಕೆಶಿ, ಅಜ್ಜಯ್ಯನ ಹೆಸರು ತೆಗೆದುಕೊಂಡವರು ಈಗ ಉಲ್ಟಾ ಹೊಡೆದರು. ಅವರು ಯಾಕೆ ಉಲ್ಟಾ ಹೊಡೆದರು ಅಂದ್ರೆ, ಅದೇ ಅಜ್ಜಯ್ಯನ ಶಕ್ತಿ. ನಾನೇನಾದ್ರೂ ತಪ್ಪು ಮಾಡಿದ್ರೆ ತಾನೇ ಯೋಚನೆ ಮಾಡಬೇಕು ಎಂದರು. ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಬಂದಾಗ ನನ್ನ ಎನರ್ಜಿ ಹೆಚ್ಚಾಗುತ್ತೆ. ನಾನು ಅತಿ ಹೆಚ್ಚು ಪ್ರೀತಿಸುವ ಸ್ಥಳ ಇದು, ಶ್ರೀಗಳು ಆಶೀರ್ವದಿಸುತ್ತಾರೆ ಎಂದು ಡಿಕೆಶಿ ಹೇಳಿದರು.
ಇನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಕಾಂಗ್ರೆಸ್ ಸೇರಲಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಅವೆಲ್ಲ ಪಟ್ಟಿ ಇಲ್ಲಿ ಹೇಳೋಕಾಗಲ್ಲ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.