ಬೆಂಗಳೂರು: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ವಿಚಾರ ಇದೀಗ ರೈತರು ಹಾಗೂ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮಿಳುನಾಡಿಗೆ ನಾವು ಹೆಚ್ಚಿನ ನೀರು ಹರಿಬಿಟ್ಟಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಪ್ರತ್ಯೇಕ ಪೀಠ ರಚಿಸಲು ತೀರ್ಮಾನಿಸಿದೆ. ವಿಪಕ್ಷದವರು ಸಾಕಷ್ಟು ಟೀಕೆ, ಟಿಪ್ಪಣಿ ಮಾಡಿದ್ದಾರೆ. ಅವರ ಕಾಲದಲ್ಲಿ ಎಷ್ಟು ನೀರು ಬಿಟ್ಟಿದ್ದಾರೆ ಎಲ್ಲದರ ಮಾಹಿತಿಯಿದೆ ಎಂದಿದ್ದಾರೆ.
ತ್ರಿಸದಸ್ಯ ಪೀಠ ಈಗಾಗಲೇ ಆದೇಶ ಮಾಡಿದೆ. ಆದ್ರೆ, ನಮ್ಮ ವಾಸ್ತವ ಪರಿಸ್ಥಿತಿ ಏನು ಎಂಬುದನ್ನು ಮುಂದಿಡುತ್ತಿದ್ದೇವೆ. ಕೆಆರ್ಎಸ್ 22 ಟಿಎಂಸಿ, ಕಬಿನಿ 7 ಟಿಎಂಸಿ, ಹಾರಂಗಿಯಲ್ಲಿ 6 ಟಿಎಂಸಿ, ಹೇಮಾವತಿಯಲ್ಲಿ 20 ಟಿಎಂಸಿ ನೀರಿದೆ. ಈ ಬಗ್ಗೆ ಚರ್ಚಿಸಲು ಬುಧವಾರ ಸಭೆ ಕರೆಯಲಾಗಿದೆ, ಸಭೆಯಲ್ಲಿ ಏನು ತೀರ್ಮಾನ ಆಗುತ್ತದೆಯೋ ಅದರಂತೆ ಹೋಗುತ್ತೀವಿ. ಸರ್ವಪಕ್ಷ ನಿಯೋಗ ಹೋಗಲು ಸೂಚಿಸಿದರೆ ಅದಕ್ಕೂ ಸಿದ್ಧ ಎಂದಿದ್ದಾರೆ.
ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬಕ್ಕೆ ಸರ್ಕಾರದಿಂದ ಮಹಿಳೆಯರಿಗೆ ಸ್ಪೆಷಲ್ ಗಿಫ್ಟ್!
ಇಂದು ಏನಾಗುತ್ತದೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ಏನು ಮಾಡಬೇಕೆಂದು ಎಲ್ಲ ಲೀಗಲ್ ತಂಡದ ಜತೆ ಚರ್ಚಿಸುತ್ತಿದ್ದೇವೆ. ಸರ್ವಪಕ್ಷ ಸಭೆಯಲ್ಲೂ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ. ತಮಿಳುನಾಡಿಗೆ ಹೆಚ್ಚಿನ ನೀರನ್ನು ಹರಿಬಿಟ್ಟಿಲ್ಲ. ರಾಜ್ಯದ ರೈತರನ್ನು ಕಾಪಾಡಬೇಕು ಅದು ನಮ್ಮ ಉದ್ದೇಶ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಪಕ್ಷಗಳ ಟೀಕೆಗೆ ಕೇರ್ ಮಾಡಲ್ಲ: ವಿಪಕ್ಷದವರು ಏನು ಬೇಕಾದರು ಮಾತನಾಡಲಿ, ಅವರು ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಈ ಹಿಂದೆ ಇವರೆಲ್ಲಾ ಎಷ್ಟು ನೀರು ಕೊಟ್ಟಿದ್ದರು, ಎಂಬುದು ತಿಳಿದಿದೆ. ಕಳೆದ 30-40 ವರ್ಷ ಈ ರೀತಿಯ ಸಮಸ್ಯೆಯಾಗಿರಲಿಲ್ಲ. ನಮ್ಮ ಬಳಿ ಈಗ ಇರುವುದೇ ಕೇವಲ 55 ಟಿಎಂಸಿ ನೀರು. ಅವರಿಗೆ 177.8 ಟಿಎಂಸಿ ಬಿಡಬೇಕು ಅದರ ಸಾಧಕ ಬಾಧಕಗಳ ಕುರಿತು ಚರ್ಚಿಸಲಾಗುತ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.