ಮೈಸೂರು: ಹೃದಯಾಘಾತದಿಂದ ನಿಧನರಾದ ಮಾಜಿ ಸಂಸದ ಧ್ರುವನಾರಾಯಣ್ ಅಂತಿಮ ದರ್ಶನದಲ್ಲಿ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ, ಸಚಿವ ಸೋಮಣ್ಣ, ಶಾಸಕ ಮಹೇಶ್, ಯತೀಂದ್ರ ಸಿದ್ದರಾಮಯ್ಯ, ಸಂಸದ ಪ್ರತಾಪ್ ಸಿಂಹ ಹಾಗೂ ಸುತ್ತೂರು ಶ್ರೀಗಳು ಸೇರಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ಇನ್ನೂ ಇದೇ ವೇಳೆ ಧ್ರುವನಾರಾಯಣ್ ನೆನೆದು ಪ್ರತಾಪ್ ಸಿಂಹ ಗಳಗಳನೇ ಕಣ್ಣೀರು ಹಾಕಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಆರ್. ಧ್ರುವನಾರಾಯಣ್ ಅವರ ಅನಿರೀಕ್ಷಿತ ಮರಣ ಆಘಾತವನ್ನುಂಟು ಮಾಡಿದೆ. ಅವರು ಶ್ರೀಮಠದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಧ್ರುವನಾರಾಯಣ್ ನಿಧನದಿಂದ ಆಘಾತವಾಗಿದೆ, ಇವರ ನಿಧನದ ನೋವನ್ನು ತಡೆದುಕೊಳ್ಳಲು ಕುಟುಂಬಕ್ಕೆ ದೇವರು ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಇನ್ನೂ ನಾಳೆ ಧ್ರುವನಾರಾಯಣ್ ಅಂತ್ಯಕ್ರಿಯೆ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ ನಡೆಯಲಿದ್ದು, ಸ್ವಗ್ರಾಮದ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.