ಕುಂದಾಪುರ: ಧರ್ಮ, ಜಾತಿ ಮೇಲಿನ ರಾಜಕಾರಣ ಅಲ್ಪಾವಧಿ ಮಾತ್ರ. ಕೊನೆಗೆ ಶಾಶ್ವತವಾಗಿ ಉಳಿಯುವುದು ಅಭಿವೃದ್ದಿ ರಾಜಕಾರಣ ಒಂದೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಧರ್ಮದ ಆಧಾರ ಮೇಲೆ ಒಮ್ಮೆ ಮತ ಗಿಟ್ಟಿಸಿಕೊಳ್ಳಬಹುದು. ಬಣ್ಣ ಬಯಲಾದ ಮೇಲೆ ಅದೇ ಅಜೆಂಡಾವನ್ನು ಇಟ್ಟುಕೊಂಡು ಮತ್ತೆ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ನಾವೆಲ್ಲರೂ ಹಿಂದೂಗಳು, ನಾವೂ ಕೂಡ ದೇವರನ್ನು ಪೂಜಿಸುತ್ತೇವೆ ಎಂದರು. ಪ್ರತಾಪಚಂದ್ರ ಶೆಟ್ಟಿ ನಮ್ಮ ಪಕ್ಷದ ಹಿರಿಯ ಮುಖಂಡರು. ಅವರು ಭಾರತ್ ಜೋಡೋ, ಸ್ವತಂತ್ರ ನಡಿಗೆ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಈ ಜಿಲ್ಲೆಯಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.
ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಬಿಜೆಪಿ ಧರ್ಮರಾಜಕಾರಣಕ್ಕೆ ಮುಂದಾಗಿದೆ. ಅಭಿವೃದ್ಧಿ ಕೆಲಸಗಳನ್ನೇ ಮಾಡದ ಬಿಜೆಪಿಗೆ ಸಾವರ್ಕರ್ ಹೆಸರೇ ಅಸ್ತ್ರವಾಗಿದೆ. ಅಭಿವೃದ್ದಿ ಕೆಲಸಗಳ ಪಟ್ಟಿ ಮಾಡಲು ಬಿಜೆಪಿಗೆ ಹೆಸರೇ ಸಿಗುತ್ತಿಲ್ಲ. ಹಾಗಾಗಿ ಸಾವರ್ಕರ್ ಅದೂ ಇದು ಅಂತ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದರು.