ವಿಜಯನಗರ : ಹೊಸಪೇಟೆ ನಗರಸಭೆಯ ಕಡತಗಳು ನಾಪತ್ತೆಯಾಗಿರುವುದು ಇದೀಗ ನೂರೆಂಟು ಅನುಮಾನಗಳನ್ನು ಹುಟ್ಟುಹಾಕಿದೆ. ಮಾಜಿ ಸಚಿವ ಆನಂದ್ ಸಿಂಗ್ ಅಳಿಯ ಸಂದೀಪ್ ಸಿಂಗ್ ಒತ್ತಡಕ್ಕೆ ನಗರಸಭೆಯ ಆಯುಕ್ತರು ಮಣಿದಿದ್ದಾರಾ? ಎಂಬ ಶಂಕೆ ಮೂಡಿದೆ.
ಸ್ಥಳೀಯ ಸಂಘಟನೆಗಳಿಗೆ ಕಡತ ತೋರಿಸಿರುವ ಆಯುಕ್ತರು ಮಾಧ್ಯಮಗಳಿಗೆ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ. ಮೊದಲು ಕೇಳಿದಾಗ ಕಡತಗಳು ಇಲ್ಲ, ಮೂರು ದಿನದ ಹಿಂದೆ ನಾಪತ್ತೆಯಾಗಿವೆ ಎಂದು ಹೇಳಿದ್ದ ಆಯುಕ್ತರು. ವಿಚಾರಿಸಿದಾಗ ಉಲ್ಟಾ ಹೊಡೆದಿದ್ದಾರೆ, ಕಡತಗಳು ನಗರಸಭೆಯಲ್ಲಿ ಇರುವ ಬಗ್ಗೆ ಲಿಖಿತವಾದ ಮಾಹಿತಿ ನೀಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ : ಅಂದು ಬೆನ್ನುತಟ್ಟಿ ಕಣ್ಣೊರೆಸಿದ್ದ ಮೋದಿ ಇಂದು ಹೆಮ್ಮೆಯಿಂದ ಅಭಿನಂದಿಸಿದ್ರು!
ನಗರಸಭೆಯ ‘ಕಳಂಕಿತ’ ಅಧಿಕಾರಿಯೊಬ್ಬರ ಮಾತಿನ ಮೇಲೆ ನಂಬಿಕೆ ಇಟ್ಟಿರುವ ಆಯುಕ್ತರು, ಕಡತಗಳು ನಾಪತ್ತೆಯಾಗಿರುವ ಸುದ್ದಿ ಹಬ್ಬಿದ ಬಳಿಕ ರಾತೋರಾತ್ರಿ ವಾಪಸ್ ತಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಎಲ್ಲಾ ಕಡತ ಇರುವುದು ನಿಜವಾದರೆ ಅವುಗಳನ್ನು ತೋರಿಸಿ ಎಂಬ ಮಾಧ್ಯಮಗಳ ಪ್ರಶ್ನೆಗೆ, ಆಯುಕ್ತ ಬಿ.ಟಿ ಬಂಡಿವಡ್ಡರ್, ಅಧ್ಯಕ್ಷೆ ಲತಾ, ಉಪಾಧ್ಯಕ್ಷ ರೂಪೇಶ್ ಕಕ್ಕಾಬಿಕ್ಕಿಯಾಗಿದ್ದಾರೆ.
ಅಲ್ಲದೆ ಕಡತಗಳನ್ನು ಹಾಗೆಲ್ಲ ತಂದು ತೋರಿಸಲು ಸಾಧ್ಯವಿಲ್ಲ ಎಂಬ ಹಾರಿಕೆಯ ಉತ್ತರವನ್ನು ನೀಡುವ ಮೂಲಕ ಸಂಘಟನೆ ಮೇಲಿದ್ದ ಅವರ ನಂಬಿಕೆ ಮಾಧ್ಯಮದವರ ಮೇಲಿಲ್ಲ ಎಂಬುವುದು ಸ್ಪಷ್ಟಪಡಿಸಿದಂತೆ ಕಂಡು ಬರುತ್ತಿದೆ. ಈ ಮೂಲಕ ಯಾರದ್ದೋ ಒತ್ತಡಕ್ಕೆ ಮಣಿದು ನಗರಸಭೆಯು ಕೆಲಸ ಮಾಡುತ್ತಿರುವ ಅನುಮಾನ ಮೂಡುತ್ತಿದೆ.
ಕಡತ ನಾಪತ್ತೆಯ ಬಗ್ಗೆ ಮಾತನಾಡಿರುವ ಹೊಸಪೇಟೆ ನಗರಸಭೆ ಉಪಾಧ್ಯಕ್ಷ ರೂಪೇಶ್, ನಾವು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
11 ಜನ ನಗರಸಭೆ ಸದಸ್ಯರು ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಪೊಲೀಸ್ ತನಿಖೆ ಮೇಲೆ ನಮಗೆ ನಂಬಿಕೆ ಇದೆ, ಕಡತ ನಾಪತ್ತೆ ಸಿಸಿಟಿವಿ ದೃಶ್ಯಗಳ ಹುಡುಕಾಟ ನಡೆದಿದೆ. ಆ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ಪ್ರಕರಣದ ಬಗ್ಗೆ ಈಗಾಗಲೆ ಹತ್ತು ಜನರಿಗೆ ನೋಟಿಸ್ ನೀಡಿದ್ದಾಗಿ ಆಯುಕ್ತರೂ ಸಹ ತಿಳಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.