ಬೆಂಗಳೂರು: ತೀರ್ಪು ನೀಡಿದ ನ್ಯಾಯಾಧೀಶರ ಹಿನ್ನೆಲೆಯನ್ನು ನೀವು ಪರಿಶೀಲಿಸಬೇಕಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಇಂತಹ ಪ್ರಕರಣದಲ್ಲಿ ಎರಡು ವರ್ಷ ಶಿಕ್ಷೆಯಾ? ರಾಹುಲ್ ಗಾಂಧಿಗೆ 3 ತಿಂಗಳು ಅಥವಾ 6 ತಿಂಗಳ ಜೈಲು ಶಿಕ್ಷೆಯನ್ನು ನೀಡಬಹುದಿತ್ತು ಆದರೆ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲು ಉದ್ದೇಶಪೂರ್ವಕವಾಗಿ 2 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಯಿತು ಎಂದು ಅನುಮಾನಪಟ್ಟಿದ್ದಾರೆ. ಇದು ಕರ್ನಾಟಕ ಚುನಾವಣೆಯ ಮೇಲೆ ಪರಿಣಾಮ ಬೀರಲಿದ್ದು, ರಾಜ್ಯದ ಜನತೆ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಗುರುವಾರ ಸೂರತ್ ನ್ಯಾಯಾಲಯ ದೋಷಿ ಎಂದು ಘೋಷಿಸಿದ ನಂತರ ಅವರ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸಿರುವುದನ್ನು ಕರ್ನಾಟಕದ ಹಲವಾರು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ನಾಯಕರು, ರಾಹುಲ್ ಬೆಂಬಲಿಗರು ಬೀದಿಗಿಳಿದು ಪ್ರತಿಭಟಿಸಿದ್ದಾರೆ.