ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಿರ್ದೇಶಕ ಭಗವಾನ್ ಇಂದು ಬೆಳಗ್ಗೆ 6 ಗಂಟೆಗೆ ಇಹ ಲೋಕತ್ಯಜಿಸಿದ್ದಾರೆ. ಸಹಕಾರ ನಗರದ ಮಗಳ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ನಿರ್ದೇಶಕ ಎಸ್.ಕೆ ಭಗವಾನ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ದೇಶಕ ಎಸ್. ಕೆ. ಭಗವಾನ್ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅತ್ಯಂತ ಬೇಸರವಾಯಿತು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಕುಟುಂಬವರ್ಗದವರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ದೊರೈ- ಭಗವಾನ್ ಜೋಡಿಯು ಕನ್ನಡ ಚಿತ್ರರಂಗಕ್ಕೆ ಅನೇಕ ಸದಭಿರುಚಿಯ ಚಿತ್ರಗಳನ್ನು ನೀಡಿದೆ. ಓಂ ಶಾಂತಿಃ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಜೇಡರ ಬಲೆ,ಕಸ್ತೂರಿ ನಿವಾಸ, ಎರಡು ಕನಸಯ, ಬಯಲು ದಾರಿ, ಆಪರೇಷನ್ ಡೈಮಂಡ್ ರಾಕೆಟ್ , ಗಿರಿಕನ್ಯೆ, ಚಂದನದ ಗೊಂಬೆ, ಮುನಿಯನ ಮಾದರಿ , ಹೊಸಬೆಳಕು ,ಬೆಂಕಿಯ ಬಲೆ,ಯಾರಿವನು ,ನೀನು ನಕ್ಕರೆ ಹಾಲು ಸಕ್ಕರೆ ,ಜೀವನ ಚೈತ್ರ, ಒಡಹುಟ್ಟಿದವರು ಹೀಗೆ ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು.
ಕನ್ನಡ ಕಲಾ ಜಗತ್ತು ಮತ್ತು ಸಿನಿಮಾ ಪ್ರಪಂಚವನ್ನು ಬೆಳಗಿ ಬೆಳ್ಳಿತೆರೆಯನ್ನು ಶ್ರೀಮಂತಗೊಳಿಸಿದ್ದ ಕನ್ನಡದ ಹಿರಿಮೆಯೂ ಆಗಿದ್ದ ಎಸ್.ಕೆ.ಭಗವಾನ್ಅವರ ನಿಧನ ಅತ್ಯಂತ ಬೇಸರ ತರಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.