Friday, September 29, 2023
spot_img
- Advertisement -spot_img

ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ! ಬಿ ಎಲ್ ಸಂತೋಷ್ ಸಭೆಗೆ ಹಲವರು ಗೈರು

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸೋತೋಷ್ ನೇತೃತ್ವದಲ್ಲಿ, ಮಲ್ಲೇಶ್ವರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಗೆ ಹಲವು ಮುಖಂಡರು ಗೈರಾಗಿದ್ದು, ಇಷ್ಟು ದಿನ ಒಳಗೊಳಗೇ ಕುದಿಯುತ್ತಿದ್ದ ಅಸಮಾಧಾನ ಇಂದು ಬಹಿರಂಗಗೊಂಡಿದೆ.

‘ಮತದಾರರ ಮಹಾಚೇತನ ಅಭಿಯಾನ’ ಸಭೆ ಹೆಸರಿನಲ್ಲಿ ಬಿಜೆಪಿ ನಾಯಕರು, ಸಂಸದರು, ಶಾಸಕರು ಹಾಗೂ ಮಾಜಿ ಶಾಸಕರ ಸಭೆ ಕರೆಯಲಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಸೋತ ಬಿಜೆಪಿ ಮತ್ತೆ ಪುಟಿದೇಳಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿತ್ತು. ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಂಬಂಧ ಸಭೆ ಕರೆಯಲಾಗಿದೆ ಎನ್ನಲಾಗಿತ್ತು. ಚುನಾವಣೆ ಸೋಲಿನ ನಂತರ ಇದೇ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಆದರೆ, ಸಂತೋಷ್ ಅವರ ಮೇಲೆ ಅಸಮಾಧಾನ ಹೊಂದಿರುವ ಹಲವರು ಇಂದು ಸಭೆಗೆ ಗೈರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇಂದು ಬೆಳಗ್ಗೆ ನಡೆದ ಸಭೆಗೆ ಹಾಲಿ-ಮಾಜಿ ಶಾಸಕರು ಮತ್ತು ಸಂಸದರು ಹಾಗೂ ಸೋತ ಅಭ್ಯರ್ಥಿಗಳು ಆಗಮಿಸಿದ್ದರು. ಬೆಳಗಾವಿ ಜಿಲ್ಲೆಯ ಪ್ರಮುಖ ನಾಯಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಠಹಳ್ಳಿ, ಪ್ರತಾಪ್ ಗೌಡ ಪಾಟೀಲ್ ತಂಡ ಸಂತೋಷ್ ನೇತೃತ್ವದ ಸಭೆಗೆ ಹಾಜರಾಗಿತ್ತು. ಆದರೆ, ಬಿಜೆಪಿಯ ಮಹತ್ವದ ಸಭೆಗೆ ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಗೈರಾಗಿದ್ದಾರೆ. ವಲಸೆ ಶಾಸಕರ ‘ಘರ್ವಾಪ್ಸಿ’ ಚರ್ಚೆಯ ಬೆನ್ನಲ್ಲೆ ಇಬ್ಬರೂ ಕೂಡ ಸಭೆಗೆ ಗೈರಾಗಿರುವುದು ಅನುಮಾನಕ್ಕೆ ಪುಷ್ಠಿ ನೀಡಿದೆ. ಬಿಜೆಪಿ ಏರ್ಪಡಿಸುತ್ತಿರುವ ಸಭೆ ಹಾಗೂ ಕಾರ್ಯಕ್ರಮಗಳಿಗೆ ಎಸ್ ಟಿ ಎಸ್ ಮತ್ತು ಹೆಬ್ಬಾರ್ ಸತತವಾಗಿ ಗೈರಾಗುತ್ತಿದ್ದಾರೆ.

ಇದನ್ನೂ ಓದಿ; ಝೀರೋ ಬಿಲ್ ಜೊತೆಗೆ ಈಗ ಝೀರೋ ಕರೆಂಟ್ ಆಗಿದೆ : ನಳಿನ್ ಕುಮಾರ್ ಕಟೀಲ್

ಆದರೆ, ನಿನ್ನೆ ನಡೆದ ಕಾಂಗ್ರೆಸ್ ಯೋಜನೆಗೆ ಆಸಕ್ತಿ ತೋರಿದ್ದ ಎಸ್ ಟಿ ಎಸ್, ಬಿಜೆಪಿ ಸಭೆಗೆ ಇಂದು ಮಾತ್ರ ಗೈರಾಗಿದ್ದಾರೆ. ಜತೆಗೆ, ಶಾಸಕ ಕೆ.ಗೋಪಾಲಯ್ಯ, ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಮಾಜಿ ಶಾಸಕ ರೇಣುಕಾಚಾರ್ಯ, ಮಾಜಿ ಸಚಿವ ವಿ.ಸೋಮಣ್ಣ ಕೂಡ ಸಭೆಗೆ ಗೈರಾಗಿ ಸಂತೋಷ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಗೆ ಆಗಮಿಸಿದ್ದ ಪರಿಷತ್ ಸದಸ್ಯ ಸಿ ಪಿ ಯೋಗೀಶ್ವರ್, ಸ್ವಲ್ಪ ಹೊತ್ತು ಮಾತ್ರ ಭಾಗವಹಿಸಿ ವರಿಷ್ಠರ ಗಮನಕ್ಕೆ ತಂದು ತೆರಳಿದರು.

ಬೊಮ್ಮಾಯಿ, ಅಶೋಕ್ ಕೂಡಾ ಗೈರು!

ಅಸಮಾಧಾನಿತ ಶಾಸಕರು ಮಾತ್ರವಲ್ಲದೆ, ವಿಪಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಿರಿಯ ಶಾಸಕರಾದ ಆರ್ ಅಶೋಕ್ ಕೂಡ ಸಭೆಗೆ ಗೈರಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನಲ್ಲಿ ಇರುವುದರಿಂದ ಅವರೂ ಕೂಡ ಸಭೆಗೆ ಬಂದಿಲ್ಲ. ಬಸವರಾಜ್ ಬೊಮ್ಮಾಯಿ ಅವರಿಗೆ ಕಣ್ಣಿನ ಆಪರೇಷನ್ ಆಗಿರುವುದರಿಂದ‌ ಅವರು ಮನೆಯಲ್ಲೇ ಉಳಿದಿದ್ದಾರೆ. ಬಿಎಸ್ ವೈ, ಕೆ.ಎಸ್ ಈಶ್ವರಪ್ಪನವರು‌ ಹಾಗೂ ಆರಗ ಜ್ಞಾನೇಂದ್ರ ಅವರು ಶಿವಮೊಗ್ಗಕ್ಕೆ ಇಂದು ಮೊದಲ ಬಾರಿ ಹೊಸ ವಿಮಾನದಲ್ಲಿ ಪ್ರಯಾಣ ಹಿನ್ನೆಲೆಯಲ್ಲಿ ಅವರೂ ಸಭೆಗೆ ಗೈರಾಗಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles