ಬೆಂಗಳೂರು: ಕಾಂಗ್ರೆಸ್‌ನ ಟೂಲ್ ಕಿಟ್‌ನ ಪರಿಣಾಮ. ಸುಳ್ಳನ್ನು ಸೃಷ್ಟಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ.
ಪತ್ರಕರ್ತರಿಗೆ ಗಿಫ್ಟ್ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಯಾರಿಗೂ ಸೂಚನೆಯನ್ನು ನೀಡಿಲ್ಲ. ಕಾಂಗ್ರೆಸ್ ಇದ್ದಾಗ ಹಲವಾರು ಜನರಿಗೆ ಏನೇನು ಉಡುಗೊರೆಗಳನ್ನು ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಪತ್ರಿಕೆಗಳಲ್ಲಿ ವರದಿಯೂ ಆಗಿದೆ. ಐ ಫೋನ್, ಲ್ಯಾಪ್‌ಟಾಪ್, ಬಂಗಾರದ ನಾಣ್ಯಗಳನ್ನೇ ಕೊಟ್ಟಿದ್ದಾರೆ. ಇವರಿಗೆ ಮಾತನಾಡಲು ಯಾವ ನೈತಿಕ ಹಕ್ಕೂ ಇಲ್ಲ ಎಂದರು. ಯಾರೋ ಒಬ್ಬರು ಲೋಕಾಯುಕ್ತಕ್ಕೆ ದೂರನ್ನು ನೀಡಿದ್ದು, ತನಿಖೆಯಾಗುತ್ತದೆ. ಇದರ ಅರ್ಥ ಎಲ್ಲಾ ಪತ್ರಕರ್ತರು ಉಡುಗೊರೆಯನ್ನು ಪಡೆದಿದ್ದಾರೆ ಎಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ.
ನಿನ್ನೆ ಕಾಂಗ್ರೆಸ್ ವಕ್ತಾರ ಬಹಳ ಕೆಟ್ಟದಾಗಿ ಅದನ್ನು ವ್ಯಾಖ್ಯಾನ ಮಾಡಿದ್ದು ಅದನ್ನು ನಾನು ಖಂಡಿಸುತ್ತೇನೆ ಎಂದರು.ಇನ್ಸ್ಪೆಕ್ಟರ್ ನಂದೀಶ್ ಪ್ರಕರಣದ ಬಗ್ಗೆ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿ ಎಲ್ಲಾ ಮಾಹಿತಿ ಪಡೆದು ತನಿಖೆ ಕೈಗೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ತನಿಖೆ ಕೈಗೊಳ್ಳುವುದರ ಬಗ್ಗೆ ಹಿಂದೆ ಮುಂದೆ ಯೋಚಿಸುವುದಿಲ್ಲ ಎಂದರು. ನವೆಂಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡಗಳ ಸಮಾವೇಶವಿದೆ. ಒಬಿಸಿ ಮೋರ್ಚಾ ಪದಾಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಸೇರುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.