ಬೆಂಗಳೂರು: ‘ಕರೆಂಟ್ ಕಳ್ಳ ಎಂದು ನನಗೆ ಲೇಬಲ್ ಕೊಟ್ಟಿದ್ದಾರೆ, ಕರೆಂಟ್ ಕಳ್ಳ ಅನ್ನೋದನ್ನ ನಿಲ್ಲಿಸಿ, ನಾನು ನಿಮ್ಮಷ್ಟು ಕಳ್ಳತನ ಮಾಡಿಲ್ಲ, ನೀವು ಹಗಲುಕಳ್ಳರು ‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಕನಕೋತ್ಸವ ಮಾಡುವಾಗ ಕೆಇಬಿಗೆ ಅರ್ಜಿ ಹಾಕಿ ಕರೆಂಟ್ ತೆಗೆದುಕೊಂಡಿದ್ರಾ? ಕರೆಂಟ್ ಕಳ್ಳ ಅಂತಾರಲಾ ಅದಕ್ಕೆ ಸ್ಪಷ್ಟನೆ ಕೊಡ್ತಾ ಇದ್ದೀನಿ.. ಕರೆಂಟ್ ಕಳ್ಳ ಅನ್ನೋದನ್ನ ನಿಲ್ಲಿಸಿ, ನಾನು ನಿಮ್ಮಷ್ಟು ಕಳ್ಳತನ ಮಾಡಿಲ್ಲ, ಹಗಲುಕಳ್ಳರು ನೀವು’ ಎಂದು ಕಿಡಿಕಾರಿದರು.
‘ದೀಪಾವಳಿ ಸಂಧರ್ಭದಲ್ಲಿ ನಮ್ಮ ಮನೆಯಲ್ಲಿ ನಡೆದ ಅಚಾತುರ್ಯದ ಬಗ್ಗೆ ನಾನು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದೇನೆ. ಕರೆಂಟ್ ಕಳ್ಳ ಎಂದು ನನಗೆ ಲೇಬಲ್ ಬೇರೆ ಕೊಟ್ಟಿದ್ದಾರೆ. ಸಿಎಂ ಹಾಗೂ ಡಿಸಿಎಂ ಸೇರಿ ಅವರ ಪಟಾಲಾಂ ಎಲ್ಲರೂ ಹೀಗೆ ಹೇಳ್ತಾ ಇದ್ದಾರೆ. ₹68,526 ದಂಡ ವಿಧಿಸಿದ್ದಾರೆ. ಆ ಬಿಲ್ ನಲ್ಲಿ ಅವರ ಲೆಕ್ಕಾಚಾರದಲ್ಲಿ 2.5 ಕಿಲೋ ವ್ಯಾಟ್ ಉಪಯೋಗ ಅಂತ ಇದೆ, ₹2526 ಹಾಕಿದ್ದಾರೆ. ನಮ್ಮ ಮನೆಗಾಗಿ 33 ಕಿಲೋ ವ್ಯಾಟ್ ಪರ್ಮಿಷನ್ ತಗೊಂಡಿದ್ದೀನಿ, ನಾನು ನಿತ್ಯ ಉಪಯೋಗ ಮಾಡುವ ಕರೆಂಟ್ ಇದು’ ಎಂದು ವಿವರಿಸಿದರು.
ಇದನ್ನೂ ಓದಿ; ಮಧ್ಯಾಹ್ನ ಬಿಸಿಯೂಟದಲ್ಲಿ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್: ಸಚಿವ ಮಧು ಬಂಗಾರಪ್ಪ
‘ನಾನು ಹಾಕಿಸಿದ್ದ ಲೈಟಿಂಗ್ಸ್‌ಗೆ ಹೆಚ್ಚು ಕರೆಂಟ್ ಬೇಕಾಗಿಲ್ಲ, ಅದು 1 ಕಿಲೋ ವ್ಯಾಟ್‌ಗಿಂತ ಕಡಿಮೆ ಆಗಲಿದೆ. ಆದರೆ, ಇವರು 2.5 ಕಿಲೋ ವ್ಯಾಟ್ ಗೆ ಲೆಕ್ಕ ತೆಗೆದುಕೊಂಡಿದ್ದಾರೆ. 7 ದಿನಕ್ಕೆ 71 ಯುನಿಟ್ ಆಗಲಿದೆ ಎಂದು 71 ಯುನಿಟ್ ಗೆ ಮೂರು ಪಟ್ಟು ದಂಡ ಹಾಕಿದ್ದಾರೆ. ಬಿಲ್ ಕೊಟ್ಟಿದ್ದೀರ, ಅದರ ಹಣ ಕಟ್ಟಲು ನಾನು ತಯಾರಿದ್ದೇನೆ. ಆದರೆ, ಇದರ ಬಗ್ಗೆ ಪುನರ್ ವಿಮರ್ಷೆ ಮಾಡಬೇಕು ಅಂತಲೂ ಹೇಳಿದ್ದೇನೆ. ನೀವು ಕೊಟ್ಟಿರುವ ಬಿಲ್ ಕೂಡ ಸರಿ ಇಲ್ಲ ಎಂದು ನಾನು ಪ್ರತಿಭಟನೆ ಮಾಡಿದ್ದೇನೆ. ಅವರು ಹಾಕಬೇಕಿದ್ದ ಬಿಲ್ ₹2526 ಆಗಬೇಕಿತ್ತು. ಆದರೆ ₹66 ಸಾವಿರ ಬಿಲ್ ಕೊಟ್ಟಿದ್ದಾರೆ’ ಎಂದು ಆರೋಪಿಸಿದರು.
ಲುಲು ಮಾಲ್ ಕಟ್ಟುವಾಗ 6 ತಿಂಗಳು ಬಿಲ್ ಕಟ್ಟಿಲ್ಲ!
ಲುಲು ಮಾಲ್ ರೆಡಿ ಆಗೋಕು ಮುನ್ನ ಎಷ್ಟು ಕರೆಂಟ್ ಬಳಸಿದ್ದಿರಾ? ಎಲ್ಲಿಂದ ತಗೊಂಡಿದ್ದು? ಆರು ತಿಂಗಳು ಕರೆಂಟ್ ಬಿಲ್ ಕಟ್ಟಿಲ್ಲ. ನಾವೆಲ್ಲಾ ಇದನ್ನ ಬ್ಯಾಟರಿ ಹಾಕಿ ಹುಡುಕಲು ಹೋಗಲಿಲ್ಲ. ನಾನೇನು ಕದ್ದು ಹೋಗ್ತಾ ಇಲ್ಲ, ನಮ್ಮ ಹಣೆಬರಹವೇ ಹೀಗಾದರೆ, ಸಣ್ಣಪುಟ್ಟ ಜನರ ಕಥೆ ಏನು? ಮೇಕೆದಾಟು ಯಾತ್ರೆ ಮಾಡುವಾಗ ಎಲ್ಲಿಂದ ಕರೆಂಟ್ ಎಳೆದುಕೊಂಡಿದ್ರು? ಪ್ರತಿ ವರ್ಷ ಕನಕೋತ್ಸವ ಮಾಡ್ತೀರಲಾ ಅದು ಎಲ್ಲಿಂದ ಬರುತ್ತದೆ? ಹಾಗಾದ್ರೆ ಅವರನ್ನೂ ನನಗಿಂತ ದೊಡ್ಡ ಕಳ್ಳ ಅನ್ನಲಾ, ಇದಕ್ಕೆಲ್ಲಾ ನಾನು ಹೆದರುವವನಲ್ಲ’ ಎಂದು ಸಿಎಂ ಹಾಗೂ ಡಿಸಿಎಂಗೆ ತಿರುಗೇಟು ಕೊಟ್ಟರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.