ರಾಮನಗರ: ಸ್ವಗ್ರಾಮದಲ್ಲಿ ಮತದಾನ ಮಾಡಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಟೋ ಚಲಾಯಿಸಿ ಖುಷಿಪಟ್ಟಿದ್ದಾರೆ. ಚುನಾವಣೆ ಹಿನ್ನೆಲೆ ಡಿಕೆಶಿ ಮತದಾನ ಮಾಡಲು ಸ್ವಗ್ರಾಮವಾದ ದೊಡ್ಡಾಲನಹಳ್ಳಿಗೆ ಬಂದಿದ್ದರು. ಮತದಾನ ಮಾಡಿದ ಬಳಿಕ ಅವರು ಆಟೋ ಹತ್ತಿ ತಾವೇ ಕೆಲ ದೂರದ ವರೆಗೆ ಆಟೋವನ್ನು ಓಡಿಸಿದ್ದಾರೆ.
ಇದೇ ವೇಳೆ ಗ್ರಾಮಸ್ಥರು ಶಿವಕುಮಾರ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಮತದಾನ ಮಾಡಿ ಹೊರ ಬಂದ ಡಿಕೆಶಿ ಹಾಗೂ ಡಿಕೆಶಿ ಪತ್ನಿ ಉಷಾ ಅವರಿಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಪತಿ ಸಿಎಂ ಆಗ್ತಾರಾ ಅಂತಾ ಕೇಳಿದ್ದಕ್ಕೆ ಪತ್ನಿ ಉಷಾ ಇದು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೊಡ್ಡ ಆಲಹಳ್ಳಿಯ ಮತಗಟ್ಟೆ ಸಂಖ್ಯೆ 245ರಲ್ಲಿ ಪತ್ನಿ ಉಷಾ, ಪುತ್ರ ಆಕಾಶ್, ಪುತ್ರಿ ಆಭರಣ, ಸಹೋದರ ಡಿ.ಕೆ ಸುರೇಶ್ ಜತೆ ಆಗಮಿಸಿ ಮತದಾನ ಮಾಡಿದ್ದಾರೆ. ಮುಂಜಾನೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಈಗಾಗಲೇ ಮತದಾರರು ಮತಗಟ್ಟೆಗೆ ಬಂದು ಮತ ಹಾಕುತ್ತಿದ್ದಾರೆ.