ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಮರಳಿ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಊಹಾಪೋಗಳಿಗೆ ನಿನ್ನೆ ಸಂಜೆ ರೆಕ್ಕೆಪುಕ್ಕ ಬಂದಿದೆ. ಏಕೆಂದರೆ, ಸೋಮಶೇಖರ್ ಬಿಜೆಪಿ ಸೇರಿದಾಗ ಅವರ ಜತೆ ಹೋಗಿದ್ದ ಬಹುಪಾಲು ಮಾಜಿ ಕಾರ್ಪೊರೇಟರ್‌ಗಳು ಮತ್ತು ಮುಖಂಡರು ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ‘ಕೈ’ ಹಿಡಿದಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ್, ತಮ್ಮ ಸಹೋದರ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರನ್ನು ಉತ್ತರದಿಂದ ಕಣ್ಣಕ್ಕಿಳಿಸಲು ಯೋಜನೆ ರೂಪಿಸಿದ್ದಾರೆ. ಸೋಮಶೇಖರ್ ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ರೆಕ್ಕೆಪುಕ್ಕ ಬರುತ್ತಿದ್ದಂತೆಯೇ ಜೆಡಿಎಸ್ ಮುಖಂಡರು ಅಲರ್ಟ್ ಆಗಿದ್ದಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಪರಾಜಿತ ಅಭ್ಯರ್ಥಿ ಜವರಾಯಿಗೌಡ ಹಾಗೂ ಬೆಂಬಲಿಗರ ಸಭೆ ಕರೆದಿದ್ದಾರೆ.
ಇದನ್ನೂ ಓದಿ; ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿಕೊಂಡ ಎಸ್.ಟಿ.ಸೋಮಶೇಖರ್ ಬೆಂಬಲಿಗರ ದಂಡು
ಕಾಂಗ್ರೆಸ್‌ನಲ್ಲಿ ಘರ್ ವಾಪ್ಸಿ ಚುರುಕುಗೊಂಡಿದ್ದು, ಕ್ಷೇತ್ರದಲ್ಲಿ ಗೆದ್ದಿರುವ ವಲಸೆ ಬಿಜೆಪಿ ಶಾಸಕರ ಮೇಲೆ ಕಣ್ಣಿಟ್ಟಿದ್ದಾರೆ. ಕೆಆರ್ ಪುರಂ, ಬ್ಯಾಟರಾಯನಪುರ, ಯಶವಂಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಕೇಶಿನಗರ ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಆಪರೇಷನ್ ಶುರು ಮಾಡಿರುವ ಡಿಕೆಶಿ, ಸೋಮಶೇಖರ್ ಅವರನ್ನು ಸೆಳೆಯುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಹೆಬ್ಬಾಳ ಮಾಜಿ ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ನಿನ್ನೆ ಭೇಟಿಯಾಗಿದ್ದ ಡಿ.ಕೆ. ಶಿವಕುಮಾರ್, ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆಗೆ ಅವಕಾಶ ಸಿಗದೇ ಇದ್ದರೆ ಕಾಂಗ್ರೆಸ್ ಗೆ ಬೆಂಬಲ ಸೂಚಿಸುವಂತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಾರಿ ಸದಾನಂದ ಗೌಡರಿಗೂ ಟಿಕೆಟ್ ಸಿಗುವುದು ಬಹುತೇಕ ಅನುಮಾನವಾಗಿದ್ದು, ಸಿಟಿ ರವಿ ಸೇರಿದಂತೆ ಹಲವರು ಕಣ್ಣಿಟ್ಟಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಆಕ್ಟಿವ್ ಆಗಿರುವ ಡಿವಿಎಸ್, ಟಿಕೆಟ್ ಸಿಗದೇ ಇದ್ದರೆ ತಟಸ್ಥರಾಗಲಿದ್ದಾರೆ ಎನ್ನಲಾಗಿದೆ. ಇದೇ ಅವಕಾಶವನ್ನು ಬಳಿಸಿಕೊಂಡು ಪಕ್ಷಕ್ಕೆ ಆಹ್ವಾನ ಅಥವಾ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೇಳಲು ಡಿಕೆಶಿ ಯೋಚಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ; ಮಾನಸಿಕವಾಗಿ, ದೈಹಿಕವಾಗಿ ಬಿಜೆಪಿ ಜೊತೆಗಿದ್ದೇನೆ; ಸೋಮಶೇಖರ್
ಜೆಡಿಎಸ್ ಮುಖಂಡರ ಜತೆ ಡಿಕೆಶಿ ಸಭೆ
ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಗೆ ಮರಳುತ್ತಾರೆ ಎಂದು ಸುದ್ದಿಯಾಗುತ್ತಿದ್ದಂತೆಯೇ ತಕ್ಷಣ ಅಲರ್ಟ್ ಆಗಿರುವ ಕುಮಾರಸ್ವಾಮಿ ಸಭೆ ಕರೆದಿದ್ದಾರೆ. ಯಶವಂತಪುರ ಕ್ಷೇತ್ರದ ಕಾರ್ಯಕರ್ತರ ಜೊತೆ ಮಹತ್ವದ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಪರಾಜಿತ ಅಭ್ಯರ್ಥಿ ಜವರಾಯಿಗೌಡ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದು, ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾದರೂ ತಯಾರಿರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಯಶವಂತಪುರ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಹೆಚ್ ಡಿಕೆ ಪ್ಲಾನ್ ಮಾಡಿದ್ದು, ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದ ಜವರಾಯೇಗೌಡರನ್ನು ಮತ್ತೆ ಕಣಕ್ಕಿಳಿಸುತ್ತಾರೆ ಎನ್ನಲಾಗಿದೆ. ಉಪ ಚುನಾವಣೆ ನಡೆದರೆ ಏನು ಮಾಡಬೇಕು ಎಂಬುದರ ಕುರಿತು ಕಾರ್ಯಕರ್ತರ ಜತೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲೇ ಸ್ಪರ್ಧಿಸಲು ಹಿಂದೇಟು ಹಾಕಿದ್ದ ಜವರಾಯಿಗೌಡರನ್ನು, ಗೆಲ್ಲಿಸುವ ಭರವಸೆ ನೀಡಿ ಚುನಾವಣೆಗೆ ನಿಲ್ಲಿಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.