ಬೆಂಗಳೂರು: ನನಗೆ ರಾಜ್ಯ ರಾಜಕಾರಣ ಮಾಡುವ ಆಸಕ್ತಿಯಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿ, ಚನ್ನಪಟ್ಟಣ, ರಾಜರಾಜೇಶ್ವರಿ ನಗರ ಸೇರಿದಂತೆ ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 6 ಕ್ಷೇತ್ರಗಳು, ಹೊರಗಿನ 4 ಕ್ಷೇತ್ರಗಳು ಸೇರಿದಂತೆ ಒಟ್ಟು 10 ಕ್ಷೇತ್ರಗಳಿಂದ ನನ್ನ ಸ್ಪರ್ಧೆಗೆ ಆಹ್ವಾನವಿದ್ದು, ಸ್ಪರ್ಧೆ ಮಾಡುವ ಆಸಕ್ತಿಯನ್ನೂ ಹೊಂದಿಲ್ಲ ಎಂದರು.
ನಾನು ಏಕೈಕ ಸಂಸದನಾಗಿದ್ದೇನೆ. ಕಳೆದ 20 ವರ್ಷಗಳಲ್ಲಿ ಉಪಚುನಾವಣೆಗಳನ್ನು ಮಾಡಿ ರೋಸಿ ಹೋಗಿದ್ದೇನೆ. ಎಲ್ಲಾ ಉಪಚುನಾವಣೆಗಳನ್ನು ನಾವು ಮಾಡಿದ್ದೇವೆ. ಈಗ ಉಪಚುನಾವಣೆ ಬಗ್ಗೆ ನನಗೆ ಆಸಕ್ತಿಯಿಲ್ಲ ಎಂದರು. ನಾನು ಎಲೆಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದೇನೆ, ರಾಮನಗರ ಚುನಾವಣೆ ಸ್ಪರ್ಧೆ ಬಗ್ಗೆ ನನ್ನ ಬಳಿ ಮಾತನಾಡಿಲ್ಲ , ರಾಷ್ಟ್ರನಾಯಕರಾಗಲಿ, ರಾಜ್ಯ ನಾಯಕರಾಗಲಿ ಚರ್ಚಿಸಿಲ್ಲ ಎಂದು ತಿಳಿಸಿದರು.
ರಾಮನಗರದಲ್ಲಿ ನಮ್ಮ ಅಭ್ಯರ್ಥಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ನಾಯಕರು ಹೇಳಿದ ಕೂಡಲೇ ಸ್ಪರ್ಧೆ ಮಾಡುವುದಲ್ಲ. ಸ್ಥಳೀಯವಾಗಿ ಕಾರ್ಯಕರ್ತರ ಜೊತೆ ಚರ್ಚೆ ಮಾಡಬೇಕು. ಅವರ ಜೊತೆ ಮಾತನಾಡಿ ತೀರ್ಮಾನ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.