ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರವರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯಲು ಬಂದಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ವಿಧಾನಸಭೆ ನೂತನ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕಾರ ಮಾಡಲಾಗುತ್ತಿದ್ದು, ನನಗೆ ರಾಜಕೀಯವಾಗಿ ಪ್ರೋತ್ಸಾಹ ನೀಡಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆಶೀರ್ವಾದ ಪಡೆಯುವುದು ನನ್ನ ಕರ್ತವ್ಯ ಹೀಗಾಗಿ ಬಂದಿದ್ದೇನೆ ಎಂದರು.
ಬೆಂಗಳೂರಿನಲ್ಲಿ ಮಳೆಯ ಅವಾಂತರದಿಂದ ಆಗಿರುವ ಸಂಕಷ್ಟದ ಬಗ್ಗೆ ಪ್ರತಿಕ್ರಿಯಿಸಿ, ನಿನ್ನೆ ರಾತ್ರಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಮಳೆಯಿಂದ ಅನೇಕ ಅನಾಹುತ ಆಗಿದೆ, ನಾವು ಎಲ್ಲೇ ಇದ್ದರೂ ಕಾಲುವೆಗಳ ಬಳಿ ಬಹಳ ಜಾಗೃತವಾಗಿ ಇರಬೇಕು. 27 ವರ್ಷದ ಯುವಕ ಕೊಚ್ಚಿ ಹೋಗಿದ್ದು, ಹಿಂದೆ ಕೇಂದ್ರ ಸರ್ಕಾರ ನರ್ಮ್ ಯೋಜನೆ ಮೂಲಕ ನಗರಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಹಳ ನೆರವು ನೀಡಿದ್ದರು. ಈಗಲೂ ನಗರಗಳಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಎಷ್ಟರ ಮಟ್ಟಿಗೆ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದು ನೋಡಬೇಕಿದೆ. ಪ್ರತಿಯೊಂದು ಜೀವ ಕಾಪಾಡುವುದು ನಮ್ಮ ಕರ್ತವ್ಯ’ ಎಂದು ತಿಳಿಸಿದರು.