ಬೆಂಗಳೂರು: ಒಂದೋ ಸಿಎಂ ಆಗಲು ನನಗೆ ಅವಕಾಶ ಕೊಡಿ ಅಥವಾ ನೀವೇ ಸಿಎಂ ಆಗಿ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ದಲಿತ ಸಿಎಂ ಮಾಡುವುದಕ್ಕೆ ನನ್ನ ವಿರೋಧವಿಲ್ಲ. ದಲಿತರು ಸಿಎಂ ಆದರೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಖರ್ಗೆ ಬಳಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಭರ್ಜರಿ ಬಹುಮತದೊಂದಿಗೆ ಗೆದ್ದು ಬೀಗಿದ್ದ ಕಾಂಗ್ರೆಸ್ ನಲ್ಲಿಮುಖ್ಯಮಂತ್ರಿ ಆಯ್ಕೆ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ನಾನು ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ, ಅಧಿಕಾರಕ್ಕೆ ತಂದಿದ್ದೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಜತೆ ಬಿಗಿಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್, ನನಗೆ ಸಿಎಂ ಆಗಲು ಅವಕಾಶ ನೀಡದಿದ್ದರೆ ನೀವೇ ಆಗಿ ಎಂದು ಖರ್ಗೆ ಯವರನ್ನು ಒತ್ತಾಯಿಸಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಪಕ್ಷ ಅಧಿಕಾರಕ್ಕೆ ತಂದಿದ್ದೇನೆ ಎಂದು ಹೇಳಿದ್ದಾರೆ.
ಕರ್ನಾಟಕ ವಿಧಾಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡು ಕಾಂಗ್ರೆಸ್ ಬಹುಮತ ಪಡೆದು ಬರೋಬ್ಬರಿ ಮೂರು ದಿನಗಳು ಕಳೆದಿವೆ. ಇಂದಿಗೂ ಕೂಡಾ ಮುಖ್ಯಮಂತ್ರಿ ಸ್ಥಾನ ಅಂತಿಮಗೊಂಡಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಿಗಿ ಪಟ್ಟು ಹಿಡಿದಿದ್ದಾರೆ, ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸಂಧಾನಕ್ಕೂ ಡಿಕೆ ಶಿವಕುಮಾರ್ ಮಣಿದಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಆಯ್ಕೆಯನ್ನು ಹೈಕಮಾಂಡ್ ಮುಂದೂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.