ಬೇಲೂರು: ಕಾಂಗ್ರೆಸ್ ನೀಡಿರೋ ಭರವಸೆ ಈಡೇರಿಸಲಾಗದಿದ್ದರೆ ಇನ್ನೆಂದೂ ರಾಜ್ಯದ ಜನರ ಮುಂದೆ ಮತ ಕೇಳಲಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಪ್ರಜಾಧ್ವನಿ ಯಾತ್ರೆ ಸಭೆಯಲ್ಲಿ ಮಾತನಾಡಿ, ರಾಜ್ಯ ಸರಕಾರ ಎಲ್ಲಾಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಸುತ್ತಿದ್ದು, ಶೇ.40 ಪರ್ಸೆಂಟ್ ಕಮಿಷನ್ ಇಲ್ಲದೆ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಕಿಡಿಕಾರಿದರು, ಹೀಗಾಗಿ ಕಾಂಗ್ರೆಸ್ ನೀಡಿದ ಘೋಷಣೆ ಬರೀ ಘೋಷಣೆಯಲ್ಲ, ಈ ಬಾರಿ ಒಮ್ಮೆ ಅಧಿಕಾರ ಕೊಟ್ಟು ನೋಡಿ, ನಿಮ್ಮ ಎಲ್ಲ ಬೇಡಿಕೆ ಈಡೇರಿಸ್ತೇವೆ ಎಂದರು.
ಈಗಾಗಲೇ ನಮ್ಮ ಕಾರ್ಯಕರ್ತರು ಮನೆ ಮನೆ ತೆರಳಿ ಗ್ಯಾರೆಂಟಿ ಕಾರ್ಡ್ ನೀಡುತ್ತಿದ್ದು ಮತದಾರರು ಇದನ್ನು ಪಡೆಯಬೇಕು ಜೊತೆಗೆ ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್, ಕುಟುಂಬದ ಮುಖ್ಯಸ್ಥೆಗೆ ಮಾಸಿಕ 2000 ರೂ. ಹಾಗೂ ಕುಟುಂಬದ ಬಿಪಿಎಲ್ ಕಾರ್ಡ್‌ದಾರರಿಗೆ ತಲಾ 10 ಕೆ.ಜಿ. ಅಕ್ಕಿ ನೀಡುವ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರ ಆಡಳಿತದ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಇದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ ಎಂದರು.