ಚಿಕ್ಕೋಡಿ: ರಾಜ್ಯದಲ್ಲಿ ಇರುವುದು ಶೇ.40 ಕಮಿಷನ್ ಸರ್ಕಾರ. ಹೋಟೆಲ್‌ನಲ್ಲಿ ಮೆನು ಕಾರ್ಡ್ ಮಾದರಿಯಲ್ಲಿ ಭ್ರಷ್ಟಾಚಾರದ ರೇಟ್ ಕಾರ್ಡ್ ಹಾಕಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
‘ಪ್ರಜಾಧ್ವನಿ ಬಸ್ ಯಾತ್ರೆ’ ನಿಮಿತ್ತ ಆರ್.ಡಿ.ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿ, ರಾಜ್ಯದಲ್ಲಿ ಇರುವುದು ಲಂಚಾವತಾರ, ಮಂಚಾವತಾರ, ಬಿ ರಿಪೋರ್ಟ್ ಬರೆಯುವ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ. ಬೊಮ್ಮಾಯಿ, ಸಹಕಾರ ಸಚಿವ ಸೋಮಶೇಖರ ಏನು ಮಾಡುತ್ತಿದ್ದಾರೆ ಗೊತ್ತಿಲ್ಲ. ನಾನು ಆ ವ್ಯಕ್ತಿಯ ಹೆಸರು ಹೇಳಲ್ಲ. ಈ .650 ಕೋಟಿ ಡಿಸಿಸಿ ಬ್ಯಾಂಕ್ ಹಣ, ನಮ್ಮ ರೈತರ ಹಣ. ಪ್ರಕರಣ ಮುಚ್ಚಿಹಾಕಿ ಎಲ್ಲರೂ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸದ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಿ ಎಂದು ನಾವೂ ಕಾಯುತ್ತಿದ್ದೇವೆ. ಇಂತಹ ಮುತ್ತುರತ್ನ, ಕೊಯನೂರು ಡೈಮಂಡ್‌ಗಳ ಬಗ್ಗೆ ಜನರಿಗೆ ತಿಳಿಸಲು ಸಜ್ಜಾಗಿದ್ದೇವೆ ಎಂದರು. ಜ.16ರಂದು ಪ್ರಿಯಾಂಕಾ ಗಾಂಧಿಯವರು ರಾಜ್ಯಕ್ಕೆ ಆಗಮಿಸಿ ರಾಜ್ಯದ ನಾಯಕಿಯರನ್ನು ಭೇಟಿ ಮಾಡುತ್ತಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ನೀಡಲು ಪ್ರಿಯಾಂಕ ಗಾಂಧಿ ಸೂಚಿಸಿದ್ದಾರೆ. ಎಲ್ಲರೂ ಕಾರ್ಯಕ್ರಮಕ್ಕೆ ಬಂದು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.