ಬೆಳಗಾವಿ: ಮಹಿಳೆಯರು ಕುಂಕುಮ ಹಚ್ಚಿದಾಗ ಮೂಗುತಿ ಹಾಕಿದಾಗ ಹೇಗೆ ಕಾಣ್ತಾರೋ? ಅದೇ ರೀತಿ ಸ್ಯಾಂಟ್ರೋ ರವಿ, ಸೈಕಲ್ ರವಿ ಬಿಜೆಪಿ ಯಲ್ಲೂ ಕಾಣಿಸಿದ್ದಾರೆ, ಇವರು ಸರ್ಕಾರದ ಮುತ್ತುರತ್ನಗಳಿದ್ದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸೈಕಲ್ ರವಿ, ಸ್ಯಾಂಟ್ರೋ ರವಿ ಮುತ್ತು ರತ್ನಗಳಿದ್ದಂತೆ, ಈ ಸರ್ಕಾರಕ್ಕೆ ಶೋಭೆ ತರುತ್ತಿದ್ದಾರೆ. ಬಿಜೆಪಿ ನಾಯಕರು ಎಂದೆಂದೂ ನೆನಪು ಇಟ್ಟುಕೊಳ್ಳುವಂಥವರು. ಕರ್ನಾಟಕ ಜನರ ಸಮಸ್ಯೆ, ನೋವು ಅಭಿಪ್ರಾಯ ಹೇಳಲು ಜನರ ಮುಂದೆ ಹೋಗುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿಗೆ ಅಭಿವೃದ್ಧಿ ಮಾಡಲು ಸಾಕಷ್ಟು ಅವಕಾಶಗಳಿದ್ದವು. ಬಂಡವಾಳ ಆಕರ್ಷಿಸುವ, ಉದ್ಯೋಗ ಸೃಷ್ಟಿಸಲು ಅವಕಾಶ ಇತ್ತು. ಆದರೆ ಮೂರೂವರೆ ವರ್ಷದಿಂದ ಈ ಸರ್ಕಾರ ಜನರ ಶಾಪಕ್ಕೆ ಒಳಗಾಗಿದೆ. ರಾಜ್ಯಕ್ಕೆ ಅಂಟಿರುವ ಶಾಪ ನಿರ್ಮೂಲನೆ ಮಾಡಲು ಪವಿತ್ರ ಭೂಮಿಯಿಂದ ಯಾತ್ರೆ ಆರಂಭವಾಗಿದ್ದು, ಕರ್ನಾಟಕ ದ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ರಾಜಧಾನಿಯಾಗಿದೆ ಎಂದು ಹೇಳಿದರು.
ಪಾಪದ ಪುರಾಣಕ್ಕೆ ಬಿಜೆಪಿ ಈ ರಾಜ್ಯದ ಜನರಿಗೆ ಉತ್ತರ ಕೊಡಬೇಕು. ಪಾಪದ ಪುರಾಣದ ಪಟ್ಟಿ ನಮ್ಮ ಬಳಿ ಇದೆ, ಅದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ ಎಂದರು.