ಬೆಂಗಳೂರು : ಭಾವನೆ ಮೇಲೆ ದೇಶ ಹಾಗೂ ಸಮಾಜವನ್ನು ಇಬ್ಭಾಗ ಮಾಡಲು ಬಿಜೆಪಿಗರು ಹೋಗುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿಯವರು ತಮ್ಮ ಕಳಂಕ ಮುಚ್ಚಿಕೊಳ್ಳಲು ನಮ್ಮ ನಾಯಕರ ಮೇಲೆ ಕಳಂಕ ಮೂಡಿಸಲು ಯತ್ನಿಸುತ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಪುಸ್ತಕ ಬರೆಯುವವರು ಚರ್ಚೆಗೆ ಬರಲಿ. ನಾವೂ ಚರ್ಚೆ ಮಾಡಲು ಸಿದ್ಧವಿದ್ದೇವೆ’ ಎಂದು ಹೇಳಿದ್ದಾರೆ.
‘ಬಿಜೆಪಿ ಆಡಳಿತ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತರಾತುರಿಯಲ್ಲಿ ಅನೇಕ ಯೋಜನೆಗಳಿಗೆ ಟೆಂಡರ್ ಕರೆಯಲು ಹೊರಟಿದೆ. ನಾನು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡುತ್ತೇನೆ. ಅಧಿಕಾರಿಗಳು ಯಾರದ್ದೋ ಏಜೆಂಟ್‌ಗಳಾಗಬೇಡಿ. ಗುತ್ತಿಗೆದಾರರು ಸುಮ್ಮನೆ ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಡಿ. ಇನ್ನು 60 ದಿನಗಳು ಕಳೆದ ಬಳಿಕ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಆ ಎಲ್ಲ ಟೆಂಡರ್‌ಗಳ ಅಂದಾಜು ಮೊತ್ತವನ್ನು ಮರು ಪರಿಶೀಲನೆ ಮಾಡಿಸುತ್ತೇವೆ ಎಚ್ಚರವಿರಲಿ’ ಎಂದು ಹೇಳಿದರು.
ಶಿವಮೊಗ್ಗ, ಕರಾವಳಿ ಭಾಗದಲ್ಲಿ ಎಷ್ಟುಬಂಡವಾಳ ಹೂಡಿಕೆ ಆಗಿದೆ? ಶಿವಮೊಗ್ಗದಲ್ಲಿ ಯಾರಾದರೂ 500 ಕೋಟಿ ರು. ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರಾ? ದಕ್ಷಿಣ ಕನ್ನಡದಲ್ಲಿ ಎಷ್ಟುಬಂಡವಾಳ ಹೂಡಿಕೆಯಾಗಿದೆ? ಈ ವೈಫಲ್ಯಗಳನ್ನು ಮುಚ್ಚಿಹಾಕಲು ನಮ್ಮ ನಾಯಕರ ಮೇಲೆ ಕಳಂಕ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.