ಚಾಮರಾಜನಗರ: ಡಾ.ಕೆ.ಸುಧಾಕರ್‌ಗೆ ಕಿವಿ, ಕಣ್ಣು, ಹೃದಯ ಇಲ್ಲ. ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಸರ್ವೆ ಮಾಡಿಸಿದ್ದು ಮುಂಬರುವ ಚುನಾವಣೆಯಲ್ಲಿ 136 ಸ್ಥಾನ ಗೆಲ್ಲುತ್ತೇವೆ. ಅಲ್ಲದೇ ಜಿಲ್ಲೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲಲ್ಲಿದ್ದೇವೆ ಎ೦ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರಿ ರೇಷ್ಮೆ ಮಾರುಕಟ್ಟೆ ಬಳಿ ಆಯೋಜಿಸಿದ್ದ ಪ್ರಜಾಧ್ವನಿ ಬಸ್ ಯಾತ್ರೆ, ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ 600 ಭರವಸೆಗಳನ್ನು ನೀಡಿತ್ತು. ಆದರೆ ಅಧಿಕಾರ ಪಡೆದ ಬಳಿಕ 550 ಭರವಸೆಗಳನ್ನು ಈಡೇರಿಸಲಿಲ್ಲ. ಅವರಿಗೆ ನುಡಿದಂತೆ ನಡೆಯಲು ಆಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ರೈತರ ಆದಾಯ ದ್ವಿಗುಣ ಮಾಡಲಿಲ್ಲ. ರಸಗೊಬ್ಬರ, ಸಿಲಿಂಡರ್ ಬೆಲೆ ಏರಿಕೆ ಯಾಗಿದೆ. ಕಳೆದ ಮೂರುವರೆ ವರ್ಷದಿಂದ ಬಿಜೆಪಿ ಆಡಳಿತ ನಡೆಸುತ್ತಿದ್ದು ಭ್ರಷ್ಟಚಾರದಲ್ಲಿ ಮುಳುಗಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಇಲ್ಲದೆ 36 ಜನರನ್ನು ಕೊಲೆ ಮಾಡಲಾಗಿದೆ. ಕೆಪಿಸಿಸಿ ವತಿಯಿಂದ ಒಂದು ಲಕ್ಷ ಪರಿಹಾರ ಕೊಡಲಾಗಿತ್ತು. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 36 ಕುಟುಂಬಗಳಿಗೂ ಮೆಡಿಕಲ್ ಕಾಲೇಜಿನಲ್ಲಿ ನೌಕರಿ ಕೊಡಿಸಲಾಗುವುದು ಎಂದರು.
ಕೆ ಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ಪ್ರಜಾಧ್ವನಿ ಜನರ ಧ್ವನಿಯಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಯಶಸ್ವಿ ಕಾರ್ಯಕ್ರಮವಾಗಿದೆ. ಜಿಲ್ಲೆಯು ಕಾಂಗ್ರೆಸ್ ಪಕ್ಷ ಭದ್ರ ಕೋಟೆ. 2008, 2013ರಲ್ಲಿ ನಾಲ್ಕು ಸ್ಥಾನಗಳನ್ನು ಗಳಿಸಿದ್ದೆವು, ಸರ್ವೆ ಪ್ರಕಾರ ಈ ಬಾರಿ ನಾಲ್ಕು ಸ್ಥಾನ ಗೆಲ್ಲುವ ಅವಕಾಶವಿದೆ ಎಂದು ತಿಳಿಸಿದರು.