ವಿಜಯಪುರ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಕೃಷ್ಣಾ ಜಲಾಂದೋಲನ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಜನರಿಗಾದ ಅನ್ಯಾಯ ಸರಿಪಡಿಸಲು ವಿಜಯಪುರಕ್ಕೆ ಬಂದಿದ್ದೇವೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, ನನೆಗುದಿಗೆ ಬಿದ್ದ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ರೈತನಿಗೆ ಸಂಬಳ ಇಲ್ಲ, ಪಿಂಚಣಿ ಇಲ್ಲ, ಅದರಂತೆ ನಿವೃತ್ತಿ ಸಹ ಇಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಅನ್ನದಾತನ ಪರವಾಗಿ ನಿಲ್ಲಲು ಪ್ರತಿಜ್ಞೆ ಮಾಡಲು ಇಲ್ಲಿಗೆ ಬಂದಿದೆ. ನುಡಿದಂತೆ ನಡೆದು, ನಿಮ್ಮ ಏಳಿಗೆಗಾಗಿ ದುಡಿಯುತ್ತೇವೆ ಎಂದು ಭರವಸೆ ನೀಡಿದರು.
ದೇವರು ವರ ಕೊಡಲ್ಲ, ಶಾಪವೂ ಕೊಡಲ್ಲ. ಆದರೆ ಅವಕಾಶ ಕೊಡುತ್ತಾನೆ. ಅದರಂತೆ ಕಾಂಗ್ರೆಸ್ ಆಯ್ಕೆ ಒಂದು ಅವಕಾಶ ಇದ್ದಂತೆ, ಅದನ್ನು ರಾಜ್ಯದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು. ಕಾಂಗ್ರೆಸ್ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷವಾಗಿದೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದೆ.
ಅಧಿಕಾರಕ್ಕೆ ಬಂದಾಗ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದರು. ರೈತರ ಆದಾಯ ಪಾತಾಳಕ್ಕೆ ಇಳಿದಿದ್ದು, ಬೆಲೆ ಏರಿಕೆ ಗಗನಕ್ಕೆ ಏರಿದೆ. ಈ ಬಿಜೆಪಿ ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕಬೇಕು ಎಂದು ಹೇಳಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದರು .